ಮಂಡ್ಯ: ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೂಚನೆ ನೀಡಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಟಾಸ್ಕ್‌ಫೋರ್ಸ್ ಮುಖ್ಯಸ್ಥ ಐಎಫ್‌ಎಸ್ ಅಧಿಕಾರಿ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸೌರಭ್‌ಕುಮಾರ್ ಅವರೊಂದಿಗೆ ಚರ್ಚಿಸಿದ ಅವರು, ಮಂಡ್ಯದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಿದೆ. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆ.ಆರ್.ಪೇಟೆ, ಮದ್ದೂರು, ಮೇಲುಕೋಟೆ, ಮಳವಳ್ಳಿ, ನಾಗಮಂಗಲ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ದನ, ನಾಯಿ, ಕುರಿ,ಮೇಕೆಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ರೈತರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಜನರ ಭಯ ನಿವಾರಿಸಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅಗತ್ಯಬಿದ್ದರೆ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು. ಜನರ ರಕ್ಷಣೆಗೆ ಟಾಸ್ಕ್‌ಫೋರ್ಸ್ ಸನ್ನದ್ಧವಾಗಿರಬೇಕು ಎಂದರು.
ಸೌರಭ್ ಕುಮಾರ್ ಮಾತನಾಡಿ, ಚಿರತೆಗಳು ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಕಬ್ಬು ಕಟಾವಿಗೆ ಬರುವ ಅಥವಾ ಈ ಭಾಗದಲ್ಲಿ ಓಡಾಡುವ ರೈತರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ, ನಗರ ಪ್ರದೇಶದಲ್ಲಿ ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬೀದಿ ನಾಯಿ, ಹಂದಿಗಳ ಪ್ರಮಾಣ ಹೆಚ್ಚಿದೆ. ಇದರಿಂದ ಚಿರತೆಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುತ್ತಿವೆ. ಚಿರತೆಗಳ ವರ್ತನೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಗುಜರಾತ್‌ನ ಗಿರ್ ಅರಣ್ಯಾಧಿಕಾರಿಗಳು, ಮುಂಬೈನ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚಿರತೆಗಳನ್ನು ಹಿಡಿದಲ್ಲಿ ದೂರದ ಕಾಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಚಿರತೆ ಕಂಡರೆ ಕರೆ ಮಾಡಿ: ಮಂಡ್ಯ ಹಾಗೂ ಮೈಸೂರು ಎರಡು ಜಿಲ್ಲೆಗಳನ್ನು ಸೇರಿಸಿ ಚಿರತೆ ಟಾಸ್ಕ್‌ಫೋರ್ಸ್ ಹಾಗೂ 24*7 ಸಹಾಯವಾಣಿಯನ್ನು ಜ.31 ರಂದು ರಚಿಸಲಾಗಿದೆ. ಡಿಸಿಎಫ್ ಅವರ ನೇತೃತ್ವದಲ್ಲಿ ಒಬ್ಬ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಲ್ವರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಂಟು ಫಾರೆಸ್ಟ್ ಗಾರ್ಡ್ ಹಾಗೂ 40 ಜನ ಸಹಾಯಕರನ್ನು ಈ ಟಾಸ್ಕ್‌ಫೋರ್ಸ್ ರಚನೆಯಾಗಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ದಿನೇಶ್ ಗೂಳಿಗೌಡ ಹೇಳಿದರು.
ಅಂತೆಯೇ ಸಹಾಯವಾಣಿ ಸಂಖ್ಯೆ 9481996026 ಆಗಿದ್ದು, ಕರೆ ಮಾಡಿದ ಶೀಘ್ರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಲಿದ್ದಾರೆ. ಸಹಾಯವಾಣಿಗೆ ಸ್ವತಃ ಕರೆ ಮಾಡಿ ಪರಿಶೀಲನೆ ನಡೆಸಿದ್ದೇನೆ. ಸದ್ಯ ದಿನಕ್ಕೆ ಮೂರ್ನಾಲ್ಕು ಕರೆಗಳು ಬರುತ್ತಿವೆ. ಜನರು ಆತಂಕಗೊಳ್ಳಬಾರದು, ಆದರೆ ಎಚ್ಚರದಿಂದ ಇರಬೇಕು. ಅಗತ್ಯ ಬಿದ್ದಾಗ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.