ಜಿಲ್ಲೆ

ಕೋಟಿತೀರ್ಥ ಸುತ್ತ ಚಿರತೆ ಭಯ

ವೀರೇಶ ಸೌದ್ರಿ

ಗೋಕರ್ಣ: ಇಲ್ಲಿನ ಕೋಟಿತೀರ್ಥ ಸುತ್ತಮುತ್ತ ಕಳೆದ ಎರಡುಮೂರು ದಿನಗಳಿಂದ ರಾತ್ರಿ ವೇಳೆ ಚಿರತೆ ಸಂಚಾರದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೋಟಿತೀರ್ಥದಿಂದ ಮುಖ್ಯ ಮಂದಿರಕ್ಕೆ ಸಾಗುವ ನಾಗಬೀದಿಯಲ್ಲಿ ಭಾನುವಾರ ಆಕಳ ಕರುವೊಂದು ಸತ್ತಿದ್ದು, ಚಿರತೆಯ ದಾಳಿಯಿಂದಾಗಿ ಮೃತಪಟ್ಟಿದೆ ಎಂದು ರೈತರು ಭಯ ವ್ಯಕ್ತ ಪಡಿಸಿದ್ದಾರೆ.

ಕೋಟಿತೀರ್ಥ ಮತ್ತು ನಾಗಬೀದಿ ಭಾಗಗಳು ಜನವಸತಿಯ ಪ್ರದೇಶಗಳು. ಜತೆಗೆ ಮುಖ್ಯ ಮಂದಿರಗಳಿಗೆ ಸನಿಹದಲ್ಲಿವೆ. ಯಾತ್ರಿಕರು ಬೆಳಗಿನ ಜಾವ ಕೋಟಿತೀರ್ಥ ಸ್ನಾನ ಮಾಡುವುದು ಮತ್ತು ಧಾರ್ಮಿಕ ವಿಧಿಗಳನ್ನು ಕೈಗೊಳ್ಳುವ ಪದ್ಧತಿಯಿದೆ. ಇಲ್ಲಿನ ಓಂ ಬೀಚ್‌ಗೆ ಹೋಗುವ ರಸ್ತೆಗಳಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಚಿರತೆ ಮಾರ್ಗ ಮಧ್ಯದಲ್ಲಿಯೇ ಮಲಗಿಕೊಂಡಿರುವುದನ್ನು ರಿಕ್ಷಾ ಓಡಿಸುವವರು ಕಂಡಿದ್ದಾರೆ. ಇದೇ ರೀತಿ ಓಂ ಬೀಚ್ ಕ್ರಾಸ್ ಹತ್ತಿರದ ಅಶೋಕೆಗೆ ಸಾಗುವ ದಾರಿಯಲ್ಲಿಯೂ ಚಿರತೆ ಓಡಾಡುವ ಬಗ್ಗೆ ಮಾಹಿತಿಗಳಿವೆ. ಓಂ ಬೀಚ್ ರಸ್ತೆಯಿಂದ ಅಜ್ಜಿಹಕ್ಕಲು ಮೂಲಕ ಕೋಟಿತೀರ್ಥ ಮತ್ತು ಮುಖ್ಯ ಮಂದಿರಗಳಿಗೆ ಸಾಗುವ ರಿಕ್ಷಾ ಮಾತ್ರ ಹೋಗಬಹುದಾದ ಕಾಂಕ್ರೀಟ್ ರಸ್ತೆಯಿದ್ದು ಈ ದಾರಿಯಲ್ಲಿ ಮತ್ತು ಇದೇ ರೀತಿಯ ಕುಡ್ಲೆ ತೀರದಿಂದ ಮಹಾಗಣಪತಿ ಮಂದಿರವನ್ನು ಸೇರುವ ಇನ್ನೊಂದು ಕಾಂಕ್ರೀಟ್ ರಸ್ತೆ ಮೂಲಕ ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.