ಹಂದಿಗಾಗಿ ಇರಿಸಿದ್ದ ಕುಣಿಕೆಗೆ ಸಿಲುಕಿ ಬಲಿಯಾದ ಚಿರತೆ. 
ಜಿಲ್ಲೆ

ಹಂದಿಗೆ ಇರಿಸಿದ್ದ ಕುಣಿಕೆಗೆ ಸಿಲುಕಿ ಚಿರತೆ ಮೃತ್ಯು

ಸೌಮ್ಯ ಆರ್

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಹಂದಿಗೆ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ದಾರುಣವಾಗಿ ಮೃತಪಟ್ಟಿದೆ.

ಇಲ್ಲಿನ ನಿವಾಸಿ ಅಣ್ಣಪ್ಪ ನಾಯ್ಕ ಎಂಬುವರ ರಬ್ಬರ್ ತೋಟದಲ್ಲಿ ಯಾರೋ ಹಂದಿ ಬೇಟೆಗಾಗಿ ಉರುಳು ಇರಿಸಿದ್ದು, ಇದಕ್ಕೆ ಚಿರತೆ ಬಲಿಯಾಗಿದೆ. ಶುಕ್ರವಾರ ಘಟನೆ ನಡೆದಿದೆ. ಹೊಟ್ಟೆಯ ಭಾಗಕ್ಕೆ ಕುಣಿಕೆ ಬಿಗಿದು ನರಳಾಡುತ್ತಿದ್ದ ಶಬ್ದ ಕೇಳಿ ಅತ್ತ ತೆರಳಿದ್ದಾಗ ಚಿರತೆ ಕುಣಿಕೆಗೆ ಸಿಲುಕಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಚಿರತೆಯ ರಕ್ಷಣೆಗಾಗಿ ವಯನಾಡಿನಿಂದ ಅರಿವಳಿಕೆ ತಜ್ಞರನ್ನು ಕರೆಸಲಾಗಿದ್ದರೂ, ತಂಡ ತಲುಪುವ ಮೊದಲೇ ಚಿರತೆ ಅಸುನೀಗಿದೆ.

ಕಳೆದ ಕೆಲವು ದಿವಸಗಳಿಂದ ಪನತ್ತಡಿ ಸನಿಹದ ಪರಿಯಾರಂ ಕಾರ್ಯಂಗಾನ ಸೇರಿದಂತೆ ವಿವಿಧೆಡೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದರೂ, ಹುಲಿ ಪತ್ತೆಯಾಗಿರಲಿಲ್ಲ. ಎರಡು ದಿನಗಳ ಹಿಂದೆ ಪಾಣತ್ತೂರಿನಲ್ಲಿ ಸಾಕು ನಾಯಿಯನ್ನು ಹುಲಿ ಹಿಡಿದಿರುವುದಾಗಿಯೂ ಸ್ಥಳೀಯರು ತಿಳಿಸಿದ್ದರು.

ಸೋಮವಾರ ರಾತ್ರಿ ವಾಹನದಲ್ಲಿ ಸಂಚರಿಸುತ್ತಿದ್ದ ಪರಿಯಾರಂ ಕಾರ್ಯಂಗಾನ ನಿವಾಸಿ ನೌಶಾದ್ ಎಂಬುವರಿಗೆ ಹುಲಿ ಕಾಣಿಸಿಕೊಂಡಿದ್ದು, ರಸ್ತೆಗೆ ಅಡ್ಡ ಸಂಚರಿಸಿದ ಹುಲಿ, ಸನಿಹದ ರಬ್ಬರ್ ತೋಟದತ್ತ ಸಾಗಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದರು. ಮಳೆ ಹಿನ್ನೆಲೆಯಲ್ಲಿ ಹುಲಿ ಹೆಜ್ಜೆ ಗುರುತಿಸಲು ಸಾಧ್ಯವಾಗಿರಲಿಲ್ಲ.