ತುಮಕೂರು: ಆಲನೂರು ಗ್ರಾಮದ ಆಚಾರಪಾಳ್ಯ ರಸ್ತೆ, ಹೇಮಾವತಿ ಚಾನಲ್ ಟನಲ್‌ನಲ್ಲಿ ಅಡಗಿದ್ದ ಚಿರತೆಯನ್ನು ಬುಧವಾರ ಅರಣ್ಯ ಇಲಾಖೆಯ 25 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದರು.
ನರಭಕ್ಷಕ ಚಿರತೆ ಕೊಲ್ಲಲು ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಮನುಷ್ಯರನ್ನು ಕೊಂದದ್ದು ಇದೇ ಚಿರತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತವಾಗಿ ಚಿರತೆ ಸೆರೆಹಿಡಿದರು. ಚಿರತೆ ನರಭಕ್ಷಕನೇ ಎಂಬುದು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕೈಚೆಲ್ಲಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ.
ಸೆರೆ ಹಿಡಿದ ಚಿರತೆ ನರಭಕ್ಷಕ ಚಿರತೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ, ಆ ಚಿರತೆ ಆಗಿಲ್ಲದೆಯೂ ಇರಬಹುದು ಎಂದು ಡಿಎಫ್‌ಒ ಗಿರಿಶ್ ‘ವಿಜಯವಾಣಿ’ಗೆ ಹೇಳಿದರು. ನರಭಕ್ಷಣೆ ಮಾಡಿದ ಸ್ಥಳದಿಂದ ಕೇವಲ 12 ಕಿ.ಮೀ.ದೂರದಲ್ಲಿ ಚಿರತೆ ಸೆರೆಹಿಡಿಯಲಾಗಿದ್ದು, ಅದೇ ಚಿರತೆ ಆಗಿರಬಹುದು ಎಂಬ ನಂಬಿಕೆ ಅಧಿಕಾರಿಗಳಿಗಿದೆ. ಸಾರ್ವಜನಿಕ ಮಾಹಿತಿ ಹಾಗೂ ಕ್ಯಾಮರಾ ಟ್ರಾಪ್‌ಗಳಲ್ಲಿ ಸೆರೆಯಾಗಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರುವುದು ಖಚಿತವಾಗಿದ್ದು, ಶಂಕಿತ ನರಭಕ್ಷಕ ಚಿರತೆಗಳನ್ನು ತ್ವರಿತವಾಗಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿಯಲಿದೆ.
ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಚಿರತೆ ದಾಳಿ ಬಾಧಿತಪ್ರದೇಶಗಳ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು. ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರ ಬಗ್ಗೆ ಕಾಳಜಿ ವಹಿಸಬೇಕು. ಮುಸ್ಸಂಜೆ ಹಾಗೂ ಬೆಳಗಿನ ಜಾವದಲ್ಲಿ ಹೊಲ, ಗದ್ದೆ, ತೋಟಗಳಿಗೆ ಹೋಗುವಾಗ ಎಚ್ಚರಿಕೆವಹಿಸಲು ಮನವಿ ಮಾಡಿದೆ.
ಡಿಎನ್‌ಎ ಪರೀಕ್ಷೆಗೆ ಸಿದ್ಧತೆ ! : ನರಭಕ್ಷಕ ಚಿರತೆಯನ್ನು ಪತ್ತೆಹಚ್ಚುವ ಹಿನ್ನೆಲೆಯಲ್ಲಿ ಸೆರೆಹಿಡಿದಿರುವ ಚಿರತೆಯ ಡಿಎನ್‌ಎ ಪರೀಕ್ಷೆಗೆ ಅರಣ್ಯ ಇಲಾಖೆ ಮುಂದಾಗಿದೆ. ದಾಳಿಯಿಂದ ಮೃತಪಟ್ಟವರ ಡಿಎನ್‌ಎ ಹಾಗೂ ಚಿರತೆ ಡಿಎನ್‌ಎ ವರದಿ ಹೋಲಿಕೆ ಮಾಡಿದಾಗ ಮಾತ್ರ ನರಭಕ್ಷಕ ಚಿರತೆ ಯಾವುದು ಎಂಬುದನ್ನು ಪತ್ತೆಹಚ್ಚಬಹುದು. ಹಾಗಾಗಿ, ಸೆರೆ ಸಿಕ್ಕ ಚಿರತೆಯ ಉಗುರು, ರಕ್ತ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಸಂಗ್ರಹಿಸಲಾಗಿದೆ.
ನರಭಕ್ಷಕ ಚಿರತೆ ಎಂದು ಖಚಿತವಾಗಿ ಹೇಳಲು ನಮ್ಮಲ್ಲಿ ಯಾವುದೇ ಆಧಾರವಿಲ್ಲ, ಶಂಕಿಸಬಹುದಷ್ಟೇ. ಸುರಕ್ಷಿತವಾಗಿ ಸೆರೆಹಿಡಿದಿರುವ 6 ವರ್ಷದ ಹೆಣ್ಣು ಚಿರತೆಯನ್ನು ಕಾಡಿಗೆ ಬಿಡಲಾಗುವುದು, ಅಲ್ಲಿನ ಸ್ಥಳೀಯರು ಭಯಬೀಳುವುದರಿಂದ ಯಾವ ಕಾಡು ಎಂದು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಎಚ್.ಸಿ.ಗಿರೀಶ್ ಡಿಎಫ್‌ಒ