ಚಿಕ್ಕಮಗಳೂರು: ಆಲ್ದೂರು ಸಮೀಪದ ಬಸ್ಕಲ್ ಗ್ರಾಪಂ ವ್ಯಾಪ್ತಿಯ ಕೆಳಗಣೆ (ನೆರಡಿ) ಗ್ರಾಮದ ಬಳಿ ಉರುಳಿಗೆ ಚಿರತೆಯೊಂದು ಸಿಲುಕಿ ಮೃತಪಟ್ಟಿದೆ.
ಬಸ್ಕಲ್ ಸಮೀಪದ ಕೆಳಗಣೆ ಗ್ರಾಮದ ಖಾಸಗಿ ಕಾಫಿ ತೋಟದ ಬಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಇರಿಸಿದ್ದ ಉರುಳಿಗೆ ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗಿನ ವೇಳೆ ಆಹಾರ ಅರಸಿ ಬಂದ ಸುಮಾರು 2 ವರ್ಷದ ಗಂಡು ಚಿರತೆ ಸಿಲುಕಿಕೊಂಡಿದ್ದು ಹೊಟ್ಟೆಯ ಭಾಗಕ್ಕೆ ಬಲವಾದ ಗಾಯವಾಗಿತ್ತು.
ಶನಿವಾರ ಬೆಳಗ್ಗೆ ಗಮನಿಸಿದ ಕಾರ್ಮಿಕರು ತೋಟದ ಮಾಲೀಕರಿಗೆ ಮಾಹಿತಿ ನೀಡಿ ಅನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಚಿರತೆಯನ್ನು ಉರುಳಿನಿಂದ ಬಿಡಿಸಲು ಶಿವಮೊಗ್ಗದ ಅರಿವಳಿಕೆ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ತಜ್ಞರು ಬರುವ ವೇಳೆಗಾಗಲೇ ಚಿರತೆ ಅಸುನೀಗಿದೆ. ಮತ್ತಾವರದ ಅರಣ್ಯ ಇಲಾಖೆ ಗೆಸ್ಟ್‍ಹೌಸ್ ಬಳಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ಕೈಗೊಂಡ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.