ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕಾಡುಮೃಗ ಮಹಿಳೆಯೊಬ್ಬರ ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕರಿಯಮ್ಮ ಕುಟುಂಬದವರಿಗೆ ಪರಿಹಾರ ವಿತರಣೆ ವಿಷಯ ಗೊಂದಲದ ಗೂಡಾಗಿದೆ.
ಕರಿಯಮ್ಮ ಅವಿವಾಹಿತೆಯಾಗಿದ್ದು ಇಬ್ಬರು ಸೋದರ ಹಾಗೂ ಮತ್ತಿಬ್ಬರು ಸೋದರಿಯರು ಹತ್ತಿರದ ಸಂಬಂಧಿಗಳಾಗಿದ್ದು, ಯಾರಿಗೆ ಪರಿಹಾರದ ಹಣ ನೀಡಬೇಕು ಎಂಬುದು ಜಿಲ್ಲಾಡಳಿತಕ್ಕೆ ಕಗ್ಗಾಂಟಾಗಿದೆ. ಇದುವರೆಗೆ ದಾಖಲೆಗಳನ್ನು ಕೇಳುವುದರಲ್ಲೆ ಕಾಲಹರಣ ಮಾಡಲಾಗುತ್ತಿದೆ ಹೊರತು ಪರಿಹಾರದ ಹಣ ಯಾರ ಕೈಗೂ ಸಿಕ್ಕಿಲ್ಲ ಎನ್ನಲಾಗಿದೆ.
ಆತಂಕದಲ್ಲೇ ಗ್ರಾಮಸ್ಥರು:ಜಿಲ್ಲೆಯಲ್ಲಿ ಕಾಡುಮೃಗಕ್ಕೆ ಇದೇ ಮೊದಲ ಬಲಿಯಾಗಿದ್ದು ಕಂಬಾಳುಗೊಲ್ಲರಹಟ್ಟಿ ಗ್ರಾಮಸ್ಥರು ಅತಂಕದಿಂದ ಹೊರಬಂದಿಲ್ಲ. ಸಂಜೆ ವೇಳೆ ಗ್ರಾಮದಲ್ಲಿ ನೀರವತೆ ಕಾಣುತ್ತಿದ್ದು ಹೊರಗಡೆ ಯಾರೋಬ್ಬರು ಸುಳಿಯದಂತಾಗಿದೆ. ತೋಟಗಳಿಗೆ ರಾತ್ರಿ ವೇಳೆ ನೀರು ಹಾಯಿಸಲು ಹಿಂಜರಿಯುತ್ತಿರುವ ಗ್ರಾಮಸ್ಥರು ಚಿರತೆ ಯಾವಾಗ ಸೆರೆಯಾಗುತ್ತದೋ ಎಂಬುದನ್ನು ಕಾದುನೋಡುವಂತಾಗಿದೆ. ಎರಡು ದಿನದ ಹಿಂದೆ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿಬಂದಿದ್ದರು. ಆದಾದ ಬಳಿಕ ಯಾವುದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದತ್ತ ಸುಳಿದಿಲ್ಲ ಎನ್ನಲಾಗಿದೆ.
ಸಿಗದ ಚಿರತೆ, ಬಾರದ ವರದಿ:ಜಮೀನಿನಲ್ಲಿ ಕರಿಯಮ್ಮ ಹುಲ್ಲು ಕೊಯ್ಯುವಾಗ ದಾಳಿ ಮಾಡಿದ್ದ ಚಿರತೆ ಸೆರೆಗೆ ಜಿಲ್ಲಾ ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ, ತುಮಕೂರಿನಿಂದ ವಿಶೇಷ ಬೋನು ಸೇರಿ 8 ಬೋನುಗಳನ್ನು ಅಳವಡಿಸಲಾಗಿತ್ತು. ಶುಕ್ರವಾರದ ಮತ್ತೊಂದು ಬೋನು ಇಟ್ಟಿದ್ದು ಚಿರತೆ ಸೆರೆಗೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಇಲಾಖೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಚಿರತೆ ಚಲನವಲನ ಕಂಡುಬಂದಿದೆ, ಪ್ರಕರಣ ನಡೆದ ಸುತ್ತಮುತ್ತಲ ಪ್ರದೇಶದಲ್ಲೇ ಚಿರತೆ ಹೆಜ್ಜೆ ಗುರುತು ಸಿಕ್ಕಿದೆ ಆದರೆ ಕಳೆದೆರಡು ದಿನದಿಂದ ಈ ಭಾಗದಲ್ಲಿ ಎಲ್ಲಿಯೂ ಚಿರತೆ ಜಾಡು ಕಂಡುಬಂದಿಲ್ಲ ಎನ್ನಲಾಗಿದೆ. ಏತನ್ಮಧ್ಯೆ ಕಾಡುಮೃಗದ ದಾಳಿಗೆ ಮಹಿಳೆ ಮೃತಪಟ್ಟಿದ್ದಾಳೆ ಎಂಬುದು ದೃಢವಾಗಿದ್ದರೂ ಚಿರತೆ ಅಥವಾ ಮತ್ಯಾವ ಪ್ರಾಣಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಲಾಖೆ ವರದಿಗಾಗಿ ಕಾದು ಕುಳಿತಿದೆ ಆದರೆ ಇದುವರೆಗೆ ವರದಿ ಕೈಸೇರಿಲ್ಲ ಎನ್ನಲಾಗಿದೆ. ಶುಕ್ರವಾರವಷ್ಟೇ ದೊಡ್ಡಬಳ್ಳಾಪುರ ಸೂಲಿಕುಂಟೆ ಬಳಿ ಚಿರತೆಯೊಂದು ಸೆರೆಯಾಗಿದೆ. ಆದರೆ ನರಭಕ್ಷಕ ಚಿರತೆ ಯಾವುದು ಎಂಬುದು ಇಲಾಖೆಗೆ ಖಚಿತವಾಗಿಲ್ಲ.
ಈ ಭಾಗದಲ್ಲಿ ಚಿರತೆ, ಕರಡಿ ಸೇರಿ ಇನ್ನಿತರ ಕಾಡುಪ್ರಾಣಿಗಳ ಹಾವಳಿ ಈ ಹಿಂದಿನಿಂದಲೂ ಇದೆ, ಇತ್ತೀಚಿನ ದಿನಗಳಲ್ಲಿ ಇವುಗಳ ಹಾವಳಿ ಜಾಸ್ತಿಯಾಗಿದೆ, ಇದರಿಂದ ಕುರಿಮೇಕೆ, ಜಾನುವಾರುಗಳನ್ನು ಸಾಕಲು ಹೆದರಿಕೆಯಾಗುತ್ತಿದೆ, ನಾಯಿ, ಕುರಿ ಮೇಕೆಗಳನ್ನು ಎಳೆದೊಯ್ಯುತ್ತಿದ್ದ ಕಾಡುಪ್ರಾಣಿಗಳು ಇದೀಗ ಮನುಷ್ಯರನ್ನು ಬಲಿ ಪಡೆದಿರುವುದು ತೀವ್ರ ಆತಂಕ ಉಂಟು ಮಾಡಿದೆ, ಚಿರತೆ ಸೆರೆಗೆ ಇಲಾಖೆ ಶ್ರಮಿಸುತ್ತಿದೆ, ನಾವೂ ಸಹ ಚಿರತೆ ಸೆರೆ ಎದುರುನೋಡುತ್ತಿದ್ದೇವೆ.
ಲಕ್ಷ್ಮಯ್ಯ, ಸ್ಥಳೀಯ ನಿವಾಸಿ