ಮೈಸೂರು: ಇನ್ಫೋಸಿಸ್ ಸೇರಿದಂತೆ ನೋಟು ಮುದ್ರಣ ಘಟಕದ ಆವರಣದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕಳೆದ 20 ದಿನಗಳ ಕಾಲ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ನೋಟು ಮುದ್ರಣಾಲಯದ ಆವರಣದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆದಿತ್ತು. ಆವರಣದ ಒಳಗೆ ವಿವಿಧ ನಾಲ್ಕು ಸ್ಥಳದಲ್ಲಿ ಬೋನು ಇರಿಸಲಾಗಿತ್ತು. ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ವನಪಾಲಕರು ಹಾಗೂ ಚಿರತೆ ಸಹಾಯಕ ಕಾರ್ಯಪಡೆ ಒಳಗೊಂಡಂತೆ 30 ಜನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ನೋಟು ಮುದ್ರಣಾಲಯದ ಹೊರಭಾಗದಲ್ಲಿ ಇರಿಸಲಾಗಿದ್ದ ಬೋನಿಗೆ ಶುಕ್ರವಾರ ಮುಂಜಾನೆ ಗಂಡು ಚಿರತೆ ಸೆರೆ ಸಿಕ್ಕಿದೆ. ಸೆರೆಯಾದ ಚಿರತೆಯನ್ನ ಸುರಕ್ಷಿತವಾಗಿ ಅರಣ್ಯ ಭವನಕ್ಕೆ ಸಾಗಿಸಿ ಪಶುವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.