ಜಿಲ್ಲೆ

ಹಾಡಹಗಲಿನಲ್ಲಿ ಜನರೆದುರೇ ಕುರಿಯನ್ನು ಹೊತ್ತೊಯ್ದ ಚಿರತೆ, ಸ್ಥಳೀಯರಲ್ಲಿ ಆತಂಕ..

ರಾಯಚೂರು: ಕಾಡುಪ್ರಾಣಿಗಳು ನಾಡಿಗೆ ಬರುವುದು ಹೊಸದೇನಲ್ಲ. ನಗರೀಕರಣ ಕಾಡುಗಳಿಗೂ ವ್ಯಾಪಿಸಲಾರಂಭಿಸಿದಂತೆ ಕಾಡುಪ್ರಾಣಿಗಳು ನಾಡಿಗೂ ಬರುವುದು ಕಾಣಲಾರಂಭಿಸಿದೆ. ಆದರೆ ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲಿ ಜನವಸತಿಯ ಪ್ರದೇಶಕ್ಕೆ ಬಂದು ಹೋಗುವ ಕಾಡುಪ್ರಾಣಿಗಳು ಇದೀಗ ಹಗಲಲ್ಲಿ ಅದೂ ಜನರೆದುರೇ ಬಂದು ಹೋಗುತ್ತಿರುವುದು ಆತಂಕ ಉಂಟು ಮಾಡಲಾರಂಭಿಸಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆಯೊಂದು ಹಗಲಿನಲ್ಲೇ ಪ್ರತ್ಯಕ್ಷವಾಗಿದೆ. ಮಾತ್ರವಲ್ಲ, ಗ್ರಾಮಸ್ಥರ ಎದುರೇ ಕುರಿಯೊಂದನ್ನು ಕಚ್ಚಿಕೊಂಡು ಹೋಗಿದೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ನಡೆದಿದೆ.

ಚಿರತೆ ತಿಂದು ಉಳಿದಿರುವ ಪ್ರಾಣಿಗಳ ದೇಹಗಳ ಭಾಗಗಳು

ರಮೇಶ್ ಎಂಬವರಿಗೆ ಸೇರಿದ ಕುರಿ ಇದಾಗಿದ್ದು, ಕಣ್ಣೆದುರೇ ಕುರಿಯನ್ನು ಕೊಂಡೊಯ್ದಿರುವುದು ಜನರಲ್ಲ ಆತಂಕ ಮೂಡಿಸಿದೆ. ಕಳೆದ ಆರು ತಿಂಗಳಿಂದ ನಾಲ್ಕು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಬೆಟ್ಟದಲ್ಲಿ ನಾಯಿ, ಕುರಿ, ನವಿಲುಗಳನ್ನ ಕೊಂದು ತಿಂದು ಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನುಗಳನ್ನ ಹಾಕಿದ್ದರೂ, ಚಿರತೆಗಳು ಅದಕ್ಕೆ ಬಿದ್ದಿಲ್ಲ. ಚಿರತೆ ಹಿಡಿಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.