ಗಂಗಾವತಿ: ತಾಲೂಕಿನ ಸಣಾಪುರ ಸಮೀಪದ ವಿರುಪಾಪುರಗಡ್ಡಿಯ ಗದ್ದೆಯಲ್ಲಿ ಶುಕ್ರವಾರ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ. ಕುರಿಗಾಹಿ ವಿರೂಪಾಕ್ಷಿ ಅವರ ಆಕಳವಾಗಿದ್ದು, ವಿರುಪಾಪುರಗಡ್ಡಿ ಮತ್ತು ಋಷಿಮುಖ ಸಂಪರ್ಕಕ್ಕೆ ಹೋಗುವ ಗದ್ದೆಯೊಂದರಲ್ಲಿ ಆಕಳು ಗುಂಪು ಬೀಡು ಬಿಟ್ಟಿದ್ದವು.
ಕುತ್ತಿಗೆ ಭಾಗಕ್ಕೆ ದಾಳಿ ನಡೆಸಿದ ಚಿರತೆ ತೀವ್ರ ಗಾಯಗೊಳಿಸಿ ಓಡಿ ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಚಿರತೆ ದಾಳಿ ಖಚಿತಪಡಿಸಿದ್ದಾರೆ. ಎರಡು ವರ್ಷದ ಹಿಂದೆ ಇದೇ ಭಾಗದಲ್ಲಿ ಇಬ್ಬರನ್ನು ಬಲಿಪಡೆದಿದ್ದ ಚಿರತೆಯನ್ನು ವಿಶೇಷ ಕಾರ್ಯಪಡೆ ಮೂಲಕ ಸೆರೆಹಿಡಿಯಲಾಗಿತ್ತು.
ಪುನಃ ಪ್ರಕರಣ ಕಂಡುಬಂದಿರುವುದು ರೈತರು ಮತ್ತು ಕೃಷಿ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಆರಣ್ಯ ಮತ್ತು ಕೃಷಿ ಭೂಮಿಯಲ್ಲಿ ರೆಸಾರ್ಟ್ ಸೇರಿ ಅಕ್ರಮ ಚಟುವಟಿಕೆ ಹೆಚ್ಚುತ್ತಿದ್ದು, ಆಹಾರ ಅರಸಿ ಬರುವ ಚಿರತೆಗಳು ಜಾನುವಾರು ಮತ್ತು ಜನಗಳ ಮೇಲೆ ದಾಳಿ ನಡೆಸುವ ಸ್ಥಿತಿ ಬಂದಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಗಂಭೀರ ಪರಿಗಣಿಸುವಂತೆ ರೈತರು ಒತ್ತಾಯಿಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.