ಕಾರವಾರ: ಬಿರು ಬೇಸಿಗೆಯಲ್ಲಿ ಪಾನಕ ಸೇವಿಸುವವರಿಗೆ ಕಹಿ ಸುದ್ದಿ. ಲಿಂಬು ಕೈಗೆಟುಕದಷ್ಟು ಹುಳಿಯಾಗಿದೆ.! ಬೇಸಿಗೆಯ ಪರಿಣಾಮ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದ್ದು, ಇದರಿಂದ ಲಿಂಬೆ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ.
ಭಾನುವಾರ ಕಾರವಾರ ಸಂತೆ ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಒಂದರಂತೆ ಸಾಮಾನ್ಯ ಗಾತ್ರದ ಲಿಂಬೆ ಹಣ್ಣು ಮಾರಾಟವಾಯಿತು. 100 ರೂ.ಗೆ ಒಂದು ಡಜನ್ ನೀಡಲಾಗುತ್ತಿತ್ತು. ಅತಿ ಚಿಕ್ಕ ಗಾತ್ರದ 100 ಲಿಂಬೆಹಣ್ಣುಗಳನ್ನು ಗ್ರಾಹಕರು ಸಾಕಷ್ಟು ಚೌಕಾಶಿ ಮಾಡಿ 100 ರೂ.ಗೆ ಪಡೆದುಕೊಂಡಿದ್ದು ಕಂಡುಬಂತು. ಸಾಯಂಕಾಲ 5 ಗಂಟೆಗೆಲ್ಲ ಲಿಂಬೆಹಣ್ಣು ಖಾಲಿಯಾಗಿದ್ದು, 50 ರೂ.ಗೆ 3 ಲಿಂಬೆ ಹಣ್ಣು ಮಾರಾಟ ಮಾಡಿದರು.
ಉತ್ತರ ಕರ್ನಾಟಕ ಭಾಗದಿಂದ ಜಿಲ್ಲೆಗೆ ಲಿಂಬೆ ಹಣ್ಣು ಪೂರೈಕೆಯಾಗುತ್ತದೆ. ನೀರಿನ ಕೊರತೆಯ ಕಾರಣ ನಿಂಬೆ ಹಣ್ಣಿನ ಇಳುವರಿ ಬೇಸಿಗೆಯಲ್ಲಿ ಕಡಿಮೆಯಾಗುತ್ತದೆ. ಆದರೆ, ಇದೇ ಅವಧಿಯಲ್ಲಿ ತಂಪು ಪಾನೀಯಗಳಿಗಾಗಿ ಲಿಂಬೆ ಹಣ್ಣಿಗೆ ಭಾರಿ ಬೇಡಿಕೆ ಬರುತ್ತದೆ. ಇನ್ನು ಮದುವೆ ಸಮಾರಂಭಗಳು ಹೆಚ್ಚಿರುವುದೂ ಲಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಲು ಕಾರಣ. ಒಟ್ಟಿನಲ್ಲಿ ಬೇಸಿಗೆಯ ಎರಡು, ಮೂರು ತಿಂಗಳು ಲಿಂಬೆ ಹಣ್ಣಿಗೆ ಬೆಲೆ. ಮಳೆಗಾಲ ಬಂದಾಕ್ಷಣ 10 ರೂಪಾಯಿಗೆ 12 ಕೊಡ್ತೇವೆ ಎಂದರೂ ಜನ ಬೇಡ ಎನ್ತಾರೆ ಎನ್ನುತ್ತಾರೆ ಲಿಂಬೆ ಹಣ್ಣಿನ ವ್ಯಾಪಾರಸ್ಥ ಯಲ್ಲಪ್ಪ.
ಇದನ್ನೂ ಓದಿ: ಮೇತ ವೃದ್ಧೆಯ ಕಣ್ಣುಗಳನ್ನು ದಾನ ಮಾಡಿದ ಮಕ್ಕಳು