ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಿಯನ್ನು ನಿಂಬೆಹಣ್ಣಿನಿಂದ ಸಿಂಗರಿಸಲಾಗಿತ್ತು. 
ಜಿಲ್ಲೆ

ಬೆಟ್ಟಳ್ಳಿ ಮಾರಮ್ಮ ದೇವಿಗೆ ನಿಂಬೆಹಣ್ಣಿನ ಅಲಂಕಾರ

ಲೋಕೇಶ್ ಮನು. ಡಿ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ 3ನೇ ಆಷಾಢ ಮಂಗಳವಾರದ ಹಿನ್ನೆಲೆ ದೇವಿಯನ್ನು ನಿಂಬೆಹಣ್ಣಿನಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಹೆಚ್ಚಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಮುಂಜಾನೆ 5.30ರಲ್ಲಿ ದೇವಿಯ ಮೂರ್ತಿಗೆ ಹಾಲು, ಮೊಸರು, ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ನಿಂಬೆಹಣ್ಣಿನಿಂದ ಸಿಂಗರಿಸಲಾಯಿತು. ಪಂಚಾಮೃತ ಅಭಿಷೇಕ ಹಾಗೂ ನೈವೇದ್ಯ ಸಮರ್ಪಿಸಿ ಧೂಪ, ದೀಪಧಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಅರ್ಚಕ ರಾಜೋಜಿರಾವ್ ಶಿಂಧೆ, ಅರುಣ್‌ರಾವ್ ಸಿಂಧೆ ಪೂಜಾ ಕೈಂಕರ್ಯ ನೆರವೇರಿಸಿದರು.

ಪಟ್ಟಣ ಸೇರಿದಂತೆ ಭೈರನತ್ತ, ಉದ್ದನೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರೆಡೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನವನ್ನು ಪಡೆದರು. ಹಣ್ಣು-ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ನಿಂಬೆಹಣ್ಣಿನ ಆರತಿ ಬೆಳಗಿಸಿದರು. ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಭಾವ ಮೆರೆದರು.