ಜಿಲ್ಲೆ

ಭೂಸ್ವಾಧೀನ ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

* ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

* ಉಪನಗರ ವಿರೋಧಿ ಹೋರಾಟಕ್ಕೆ ಬೆಂಬಲ

ಬಿಡದಿ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರೈತರ ಮುಂದೆ ತೊಡೆ ತಟ್ಟುತಿದ್ದೀರಿ,ಆದರೆ, ನಿಮ್ಮನ್ನು ಮನೆಗೆ ಕಳಿಸುವ ಕಾಲ ದೂರವಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿ ಉಪನಗರ ಭೂಸ್ವಾಧೀನ ವಿರೋಧಿಸಿ ಬೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ನಿಖಿಲ್, ಸರ್ಕಾರ ಎಷ್ಟೇ ದಬ್ಬಾಳಿಕೆ ಮಾಡಿದರೂ ರೈತರಿಂದ ಒಂದಿಂಚೂ ಭೂಮಿ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಗುಡುಗಿದರು.

ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ರೂಪಿಸಿರುವ ಟೌನ್‌ಶಿಪ್ ಯೋಜನೆಯನ್ನು ಹಿಂಪಡೆಯದಿದ್ದರೆ ಇದೇ ಬೈರಮಂಗಲದಿಂದ ಪಾದಯಾತ್ರೆ ಮೂಲಕ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಗೃಹಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಮೂಲಕ ದೌರ್ಜನ್ಯ

ಸ್ಮಾರ್ಟ್ ಸಿಟಿ ಯೋಜನೆಗೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಶೇ.80 ರೈತರು ಭೂಮಿಯನ್ನು ನೀಡುವುದಿಲ್ಲ ಎನ್ನುತ್ತಾರೆ. ಹೀಗಿದ್ದರೂ, ಯೋಜನೆಯ ಸಾಧಕ-ಬಾಧಕ ವಿಚಾರಿಸದೆ ಪೊಲೀಸರ ಮೂಲಕ ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿಸುತ್ತಿರುವುದು ಯಾವ ಉದ್ದೇಶಕ್ಕೆ? ಎಂದು ವಾಗ್ದಾಳಿ ನಡೆಸಿದರಲ್ಲದೇ ಸರ್ಕಾರದ ಅನ್ಯಾಯ ಖಂಡಿಸಿ, ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ನಿಖಿಲ್‌ಕುಮಾರ್ ಸ್ವಾಮಿ ರೈತರಿಗೆ ಭರವಸೆ ನೀಡಿದರು.

ಮಾಜಿ ಶಾಸ ಎ.ಮಂಜುನಾಥ್ ಮಾತನಾಡಿ, ಭೂಮಿ ಉಳಿವಿಗಾಗಿ ಹೋರಾಟ ಮಾಡುತ್ತಿರುವ ರೈತರನ್ನು ನಕಲಿ ರೈತರು, ಬ್ರೋಕರ್‌ಗಳು ಎಂದು ಡಿ.ಕೆ.ಶಿವಕುಮಾರ್ ದರ್ಪದ ಮಾತು ಆಡಿದ್ದಾರೆ. ರೈತರೊಂದಿಗೆ ಮಾತನಾಡುವ ನೈತಿಕತೆ ಇಲ್ಲದವರು ರೈತರ ಜಮೀನುಗಳ ಸರ್ವೇಗೆ ಮುಂದಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿ ಮುಚ್ಚಲು ಹಣ ಇಲ್ವಾ?

ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಆದರೂ ಇಲ್ಲಿ ಎಐ ಸಿಟಿ ನಿರ್ಮಿಸಲು ಹಣ ಇದೆಯಾ? ಎಂದು ಪ್ರಶ್ನಿಸಿದ ನಿಖಿಲ್ ಕುಮಾರಸ್ವಾಮಿ, ಈ ಹಿಂದೆ ಮೇಕೆದಾಟು ಯೋಜನೆಗೆ ಒತ್ತಾಯಿಸಿ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದೀರಿ, ರಾಜ್ಯದಲ್ಲೀಗ ನಿಮ್ಮದೆ ಸರ್ಕಾರ ಇದ್ದರೂ ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ಪರಿಣಾಮ ನಮ್ಮ ನೀರು ಕಂಡವರ ಪಾಲಾಗುತ್ತಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕರಾದ ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ಟಿ.ಎನ್. ಜವರಾಯಿಗೌಡ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ, ಜಯಮುತ್ತು, ರೈತ ಹೋರಾಟ ಹಿತರಕ್ಷಣಾ ಸಂಘದ ರಾಮಯ್ಯ, ಶೀನಪ್ಪರಡ್ಡಿ, ಪ್ರಕಾಶ್, ಮಂಡಲಹಳ್ಳಿ ನಾಗರಾಜು ಹಾಗೂ ಇತರರು ಉಪಸ್ಥಿತರಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದರ್ಪ, ದಬ್ಬಾಳಿಕೆ ಹೆಚ್ಚಾಗಿದೆ. ಇನ್ನಾದರೂ ತಗ್ಗಿಬಗ್ಗಿ ನಡೆಯಬೇಕಿದೆ. ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣ ಮಾಡುವುದೇ ಒಂದು ಕಾಯಕವಾಗಿದೆ. ರೈತರ ಸಮಸ್ಯೆಗಳಿಗೆ ಧ್ವನಿಯಾಗುವುದನ್ನು ಸರ್ಕಾರ ಮರೆತಿದೆ.ಸುರೇಶ್ ಬಾಬುಜೆಡಿಎಸ್ ಶಾಸಕಾಂಗ ನಾಯಕರೈತರ ಪರವಾಗಿ ಇರುವ ಪಕ್ಷ ಜೆಡಿಎಸ್. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳಲ್ಲಿ ರೈತರ ಭೂಮಿಯ ಉಳಿವಿಗಾಗಿ ಹೋರಾಟ ಮಾಡುವೆವು.ಟಿ.ಎ.ಶರವಣವಿಧಾನ ಪರಿಷತ್ ಸದಸ್ಯ