ಬಾಗೇಪಲ್ಲಿ: ಕ್ಷೇತ್ರದ ಕಾಂಗ್ರೆಸ್ ಶಾಸಕರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಜಾ ಗೊಳಿಸುವಂತೆ ಕೋರಿ ಸುಪ್ರೀಂ ಹಾಗೂ ರಾಜ್ಯ ಹೈಕೋರ್ಟ್‌ನಲ್ಲಿ ಶಾಸಕ ಸುಬ್ಬಾರೆಡ್ಡಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿ, ಪ್ರಕರಣದ ವಿಚಾರಣೆಯನ್ನು ಮುಂದುವರಿಸಿರುವಂತೆ ಆದೇಶ ನೀಡಿದ್ದು, ಇದರಿಂದ ಶಾಸಕ ಸುಬ್ಬಾರೆಡ್ಡಿ ಸದಸ್ಯತ್ವಕ್ಕೆ ಕಾನೂನಿನ ಸಂಕಷ್ಟ ಎದುರಾಗುವ ಸಂಭವ ಹೆಚ್ಚಿದೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 2023ರ ಮೇ 10ರಂದು ನಡೆದ ಚುನಾವಣೆಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷಪೂರಿತವಾಗಿದ್ದು, ನಾಮಪತ್ರದಲ್ಲಿ ಆಸ್ತಿ ವಿವರ ಮುಚ್ಚಿಟ್ಟಿರುವ ಹಾಗೂ ಆಸ್ತಿ ತೆರಿಗೆ ಪಾವತಿ ಬಾಕಿ ಕುರಿತು ಮಾಹಿತಿ ನೀಡದೆ ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಸಿ. ಮುನಿರಾಜು ರಾಜ್ಯ ಹೈಕೋರ್ಟ್‌ನಲ್ಲಿ ಚುನಾವಣಾ ಅಕ್ರಮ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕೂಡ ಅರ್ಜಿಯ ವಿಚಾರಣೆಯನ್ನು ವಜಾಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠ ಶಾಸಕರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು 2024ರ ಮಾರ್ಚ್‌ನಲ್ಲಿ ವಜಾಗೊಳಿಸಿ ವಿಚಾರಣೆ ಮುಂದುವರಿಸುವಂತೆ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಶಾಸಕರ ಪರ ವಕೀಲ ಕಪಿಲ್ ಸಿಬಲ್, ಪರಾಜಿತ ಅಭ್ಯರ್ಥಿ ಪರ ವಕೀಲೆ ನಳಿನಿ ಮಾಯೇಗೌಡ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ಜಸ್ಟೀಸ್ ಸೂರ್ಯಕಾಂತ್ ಹಾಗೂ ಜಸ್ಟೀಸ್ ಉಜ್ಜಲ್ ಬುಯ್ಯನ್, ಸುಬ್ಬಾರೆಡ್ಡಿಯ ಮೇಲ್ಮನವಿ ವಜಾಗೊಳಿಸಿ ರಾಜ್ಯ ಹೈಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಸುವಂತೆ ಆದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕಾನೂನಿನ ಸಂಕಷ್ಟ ಎದುರಾಗಿದ್ದು, ಕೋರ್ಟ್‌ನ ಮುಂದಿನ ಆದೇಶದವರೆಗೂ ಕಾದು ನೋಡುವಂತಾಗಿದೆ.
"ಎಸ್.ಎನ್.ಸುಬ್ಬಾರೆಡ್ಡಿ ವಿಧಾನಸಭೆ ಚುನಾವಣೆ ವೇಳೆ ದೋಷಪೂರಿತ ನಾಮಪತ್ರ ಸಲ್ಲಿಸಿ ಶಾಸಕರಾಗಿ ಅಯ್ಕೆಯಾಗಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ನಾವೆಲ್ಲರೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಬೇಕು."
ಸಿ.ಮುನಿರಾಜು, ಪರಾಜಿತ ಬಿಜೆಪಿ ಅಭ್ಯರ್ಥಿ