ಜಿಲ್ಲೆ

ದೈಹಿಕ ನ್ಯೂನ್ಯತೆ ಮೀರಿದರೆ ವಿಶೇಷ ಸಾಧನೆ

ಚಿಕ್ಕಮಗಳೂರು: ದೈಹಿಕ ನ್ಯೂನ್ಯತೆಯಿದೆ ಎಂದು ಕೊರಗಿ ಕುಳಿತರೆ ಜೀವನದಲ್ಲಿ ಸಾಧನೆ ಮಾಡಲು ಅಸಾಧ್ಯ. ದೈಹಿಕ, ಅಂಗ ನ್ಯೂನ್ಯತೆ ಮೀರಿ ಬೆಳೆದರೆ ಸಾಮಾನ್ಯ ವ್ಯಕ್ತಿಗಿಂತ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಹೇಳಿದರು.

ಕೆಂಪನಹಳ್ಳಿ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

7 ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ವಾಲಿಬಾಲ್ ಪಟು ಅರುಡಿಮಾ ಸಿಂಹ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿ ವಿಶ್ವದ ಅತಿ ಎತ್ತರದ ಅನೇಕ ಪರ್ವತ ಏರಿ ಸಾಹಸ ಮೆರೆದ ಕಾರಣ 2015ರಲ್ಲಿ ಕೆಂದ್ರ ಸರ್ಕಾರ ಆಕೆಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಎಲ್ಲರಲ್ಲೂ ಒಂದು ಚೇತನವಿರುತ್ತದೆ. ದೈಹಿಕ ನ್ಯೂನ್ಯತೆ ಉಂಟಾದಾಗ ಬೇರೆ ರೀತಿಯ ಚೇತನ ದೇಹದಲ್ಲಿ ಬರುತ್ತದೆ ಎಂದರು.

ಶಾಲೆ ಪ್ರಭಾರ ಮುಖ್ಯಶಿಕ್ಷಕ ಎಚ್.ಎಸ್.ಲಕ್ಷೆ್ಮೕಗೌಡ ಮಾತನಾಡಿ, ದೈಹಿಕ ನ್ಯೂನ್ಯತೆ ಶಾಪವಲ್ಲ. ನಮ್ಮಲ್ಲೂ ಬೇರೆಯದೇ ಸಾಮರ್ಥ್ಯ ವರವಾಗಿದೆ ಎಂದು ಪರಿಗಣಿಸಿ ಸಕಾರಾತ್ಮಕ ಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ವೀರಭದ್ರಯ್ಯ ಮಾಜಿಗೌಡರ್, ಸಿಡಬ್ಲ್ಯುಸಿ ಸದಸ್ಯ ಕೆ.ಎನ್.ಚಂದ್ರಶೇಖರ್, ವಕೀಲ ನಟರಾಜ್, ಸಂಸ್ಥೆ ಉಪಾಧ್ಯಕ್ಷ ನಸ್ರುಲ್ಲಾ ಶರೀಫ್, ಡಿಡಿಆರ್​ಸಿ ಪ್ರಕಾಶ್ ಇದ್ದರು.