ಜಿಲ್ಲೆ

ಮಕ್ಕಳಿಗೂ ಇರಲಿ ಅವಶ್ಯಕ ಕಾನೂನು ತಿಳಿವಳಿಕೆ

ಬಸವರಾಜ ವೀರಪ್ಪ ಗರಗ

ರೋಣ: ಪೋಕ್ಸೋ ಕಾಯ್ದೆ ಹಾಗೂ ಮತ್ತು ಮಕ್ಕಳ ಹಕ್ಕುಗಳ ಸೇರಿ ಅವಶ್ಯಕ ಕಾನೂನುಗಳನ್ನು ಮಕ್ಕಳು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ರೋಣ ಜೆಎಂಎಫ್​ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ಚಿನ್ನಸ್ವಾಮಿ ಎಸ್. ಹೇಳಿದರು.

ಪಟ್ಟಣದ ಎಸ್.ಆರ್. ಪಾಟೀಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ರೋಣ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಕಾರ್ವಿುಕ ಇಲಾಖೆ, ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಾಲ ಕಾರ್ವಿುಕ ನಿಮೂಲನಾ ಜಾಥಾ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪೋಕ್ಸೋ ಮಕ್ಕಳ ಹಿತ ಕಾಯುವ ಕಾಯ್ದೆಯಾಗಿದೆ. ಈ ಕಾಯ್ದೆ ಹೆಣ್ಣು ಮತ್ತು ಗಂಡು ಮಕ್ಕಳ ಇಬ್ಬರಿಗೂ ಅನ್ವಯಿಸುತ್ತದೆ. ಶೇ. 90ರಷ್ಟು ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ನ್ಯಾಯಾಲಯಕ್ಕೆ ಭೇಟಿ ನೀಡಿ ಪೋಕ್ಸೋ ಪ್ರಕರಣಗಳ ಕುರಿತು ತಿಳಿದುಕೊಳ್ಳಬೇಕು. ಮಾನವ ಕಳ್ಳ ಸಾಗಾಣಿಕೆ ತಡೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ರೋಣ ಜೆಎಂಎಫ್​ಸಿ ನ್ಯಾಯಾಲಯದ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಭರತ ಯೋಗೇಶ ಕರಗುದರಿ ಮಾತನಾಡಿ, ಹುಟ್ಟಿನಿಂದ ಮರಣದವರೆಗೆ ಕಾನೂನಿನ ಚೌಕಟಿನಲ್ಲಿ ಬದುಕಲಾಗುತ್ತದೆ. ಸಾವಿರಕ್ಕೂ ಅಧಿಕ ಕಾನೂನುಗಳಿದ್ದು, ಪ್ರತಿಯೊಬ್ಬರಿಗೂ ಅವಶ್ಯಕ ಕಾನೂನುಗಳ ಅರಿವು ಅಗತ್ಯವಾಗಿದೆ. ಕಾನೂನು ತಿಳಿದುಕೊಂಡರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

ರೋಣ ತಹಸೀಲ್ದಾರ್ ನಾಗರಾಜ ಕೆ., ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಅದಿತ್ಯ ಆರ್.ಕಲಾಲ, ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ಬಂಗಾರಿ, ರುದ್ರಪ್ಪ ಹುರಳಿ, ವಿರೂಪಾಕ್ಷಯ್ಯ ಹಿರೇಮಠ, ಎಸ್.ಎಸ್. ಬೀಳಗಿ, ಪ್ರಕಾಶ ಬಣಕಾರ, ಐ.ಎ. ಫಾರೂಕಿ, ರಾಜೇಶ್ವರಿ ಚಕ್ಕಲಿಯವರ, ಶಿವಾನಂದ ಹೂಲಿ, ಮಂಜುಳಾ ಅಖಾಡೆ, ಮಂಜುಳಾ ಗುಣಾರಿ, ಎ.ಎಸ್. ಅರಹುಣಸಿ, ರಮೇಶ ಗೊಂದಲಕರ, ಬಸವರಾಜ ಅಂಗಡಿ, ಇತರರಿದ್ದರು.