ಮೈಸೂರು: ಪ್ರತಿಯೊಬ್ಬರಿಗೂ ನೆಮ್ಮದಿ ಜೀವನ ನಡೆಸಲು ಕಾನೂನು ಅರಿವು ಅವಶ್ಯಕ ಎಂದು ಜೆಎಸ್‌ಎಸ್ ಕಾನೂನು ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್ ತಿಳಿಸಿದರು.
ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಹಯೋಗದಲ್ಲಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರದ ನಾಲ್ಕನೇ ದಿವಾದ ಗುರುವಾರ ಕಾನೂನು ಅರಿವು ಕುರಿತು ಮಾತನಾಡಿದರು.
ಭಾರತೀಯ ಸಂವಿಧಾನ ಅತ್ಯುತ್ತಮ ಸಂವಿಧಾನಗಳಲ್ಲೊಂದಾಗಿದೆ. ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಕಾನೂನಿನ ಅರಿವು ಇರಬೇಕು. ಕಾನೂನಿನ ತಿಳಿವಳಿಕೆ ಇದ್ದರೆ ನಮಗೆ ಉಂಟಾಗಬಹುದಾದ ಅನ್ಯಾಯಗಳ ವಿರುದ್ಧ ಸಮರ್ಪಕವಾಗಿ ಧ್ವನಿ ಎತ್ತಬಹುದು. ನಾವು ಅನಗತ್ಯ ವಿವಾದ ಸೃಷ್ಟಿಸಿಕೊಂಡು ನ್ಯಾಯಾಲಯಗಳಿಗೆ ಹೋಗುವುದನ್ನು ಕಡಿಮೆ ಮಾಡಿಕೊಂಡರೆ ನೆಮ್ಮದಿ ಜೀವನ ನಡೆಸಬಹುದು ಎಂದು ತಿಳಿಸಿದರು.
ಚಿಂತಕಿ ಡಾ.ದೀಪಿಕಾ ಪಾಂಡುರಂಗಿ ಮಾತನಾಡಿ, ಭಾರತೀಯ ಸಂಸ್ಕೃತಿ ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ವೈವಿಧ್ಯಮಯ ಸಂಸ್ಕೃತಿಯಾಗಿದೆ. ಒಂದು ರಾಷ್ಟ್ರದ ಸಂಸ್ಕೃತಿಯು ಜನರ ಹೃದಯ ಮತ್ತು ಆತ್ಮದಲ್ಲಿ ನೆಲೆಸಿದೆ. ಸಂಸ್ಕೃತಿಯು ವ್ಯಕ್ತಿಗಳ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಉತ್ತಮ ಸಂಸ್ಕಾರವು ಮನುಷ್ಯನನ್ನು ಸುಸಂಸ್ಕೃತನನ್ನಾಗಿ ರೂಪಿಸುತ್ತದೆ. ಭಾರತೀಯ ಸಂಸ್ಕೃತಿಯು ಭಾವನಾತ್ಮಕ, ಆಧ್ಯಾತ್ಮಿಕವಾಗಿ ಹಾಗೂ ನೈತಿಕವಾಗಿ ಆಲೋಚನೆ ಮಾಡುವುದನ್ನು ಕಲಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ನಾವುಗಳು ಮರೆಯುತ್ತಿದ್ದೇವೆ. ನಮ್ಮ ಅನುಭವಗಳು ಸಕಾರಾತ್ಮಕವಾಗಿದ್ದರೆ ಅದನ್ನು ಸಂಸ್ಕೃತಿ ಎನ್ನಬಹುದು. ಜಗತ್ತಿನ ಬೇರೆ ಸಂಸ್ಕೃತಿಗಳನ್ನು ಗೌರವಿಸುತ್ತ ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕು ಎಂದು ತಿಳಿಸಿದರು.
ಅಣಕು ರಾಮನಾಥ್ ಮಾತನಾಡಿ, ನಗುವಿಗೆ ನಮ್ಮ ಎಲ್ಲ ನೋವುಗಳನ್ನು ಮರೆಸುವ ಶಕ್ತಿ ಇದೆ. ನಾವು ಪ್ರತಿಯೊಂದೂ ಸನ್ನಿವೇಶಗಳಲ್ಲೂ ಹಾಸ್ಯಪ್ರಜ್ಞೆ ಹೊಂದಿದ್ದರೆ ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದು. ನಮಗೆ ಅನುಕೂಲವಾದ ಸಂದರ್ಭದಲ್ಲಿ ಸಂತೋಷವನ್ನು ನಾವೇ ಸೃಷ್ಟಿಸಿಕೊಳ್ಳಬಹುದು. ಮನುಷ್ಯನಿಗೆ ಬರುವ ಬಹುತೇಕ ಕಾಯಿಲೆಗಳಿಗೆ ಇಂದಿಗೂ ನಗು ದಿವ್ಯ ಔಷಧವಾಗಿದೆ ಎಂದು ತಿಳಿಸಿದರು.