ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿಯಿಂದ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಸಚಿವ ಸಂಪುಟ ಸಭೆಯಲ್ಲಿ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ತೀರ್ಮಾನಿಸಿ, ವಕೀಲರ ಮೂಲಕ ನ್ಯಾಯಾಲಯಕ್ಕೆ ಅಜಿರ್ ಸಲ್ಲಿಸಿದೆ ಎಂಬ ಮಾಹಿತಿ ಇದೆ. ಬಿಜೆಪಿಯಿಂದಲೂ ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ಕಿಡಿಗೇಡಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಸಹ ನಡೆಸಿದ್ದರು. ಪೊಲೀಸ್ ವಾಹನಗಳನ್ನು ಜಖಂ ಗೊಳಿಸಿದ್ದರು. ಇದನ್ನೆಲ್ಲ ಆಗಿನ ಪೊಲೀಸ್ ಅಧಿಕಾರಿಗಳು ಚಾರ್ಜ್ಶೀಟ್ನಲ್ಲೇ ಸ್ಪಷ್ಟಪಡಿಸಿದ್ದಾರೆ. ಸಮಾಜ ರಕ್ಷಣೆ ಕಾರ್ಯದಲ್ಲಿ ತೊಡಗಿದ ಪೊಲೀಸರನ್ನು ರಕ್ಷಿಸುವ ಇರಾದೆ ಈ ಸರ್ಕಾರಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೊರಗಿನವರ ಕೈವಾಡವಿದೆ. ಉಗ್ರವಾದ ಚಟುವಟಿಕೆ ಸ್ವರೂಪದಂತಿದೆ ಎಂಬ ಕಾರಣಕ್ಕೆ ಆಗಲೇ ಸಿಬಿಐ ತನಿಖೆಗೆ ವಹಿಸಲು ಚರ್ಚೆ ನಡೆದಿತ್ತು. ಆದರೆ, ಈ ಸರ್ಕಾರ ಗಲಭೆ ಆರೋಪಿಗಳನ್ನು ಖುಲಾಸೆಗೊಳಿಸಲು ನೋಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಪ್ರಕಾರ ಗಲಭೆ ವೇಳೆ ಪೊಲೀಸರೇ ತಪ್ಪೆಸಗಿದ್ದಾರೆ ಎಂದಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ ನೋಡೋಣ ಎಂದ ಸಚಿವ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂರ್ಪೂಣ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದರೆ ರಾಜ್ಯದಲ್ಲಿ ಉಗ್ರವಾದ ಚಟುವಟಿಕೆಗಳಿಗೆ ತಾನೇ ಬೆಂಬಲ ನೀಡಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಅನ್ಯಾಯ ಮಾಡಿಲ್ಲ: ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಲೇ ಇದೆ ರಾಜ್ಯ ಸರ್ಕಾರ. ಇದಕ್ಕೆ ನಾನು ಸಾಕಷ್ಟು ಬಾರಿ ಅಂಕಿ ಅಂಶ ಸಮೇತ ಸ್ಪಷ್ಟಪಡಿಸಿದ್ದೇನೆ. ಹಣಕಾಸು ಆಯೋಗ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾಲದಿಂದಲೂ ಇದ್ದು, ಅದರ ಪ್ರಕಾರವೇ ಕೇಂದ್ರ ಅನುದಾನ ಒದಗಿಸುತ್ತಿದೆ. ಇನ್ನೂ ಹೆಚ್ಚಿನ ಹಣಕಾಸು ನೀಡಿದೆಯೇ ಹೊರತು ಅನ್ಯಾಯ ಮಾಡಿಲ್ಲ ಎಂದು ಜೋಶಿ ಸರ್ಮಥಿಸಿಕೊಂಡರು.