dinesh gundurao 
ಜಿಲ್ಲೆ

ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ

Chethan padubidri

ಪ್ರಮುಖ ಮುಖ್ಯಾಂಶಗಳು

  • ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
  • ಲಕ್ಷಾಂತರ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ
  • ದೇಶದ ಮಕ್ಕಳ ಭವಿಷ್ಯದಲ್ಲಿ ಕೇಂದ್ರ ಚಲ್ಲಾಟವಾಡುತ್ತಿದೆ
ಮಂಗಳೂರು: ಎಸ್‌ಐಆರ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಎಸ್‌ಐಆರ್ ವಿರುದ್ಧ ಕರ್ನಾಟಕದಿಂದ ಕಾನೂನಾತ್ಮಕ ಹೋರಾಟ ನಡೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು. ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್‌ಐಆರ್ ಮೂಲಕ ಯಾರ ಮತಗಳನ್ನು ತೆಗೆಯಬೇಕೋ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಇದೊಂದು ವ್ಯವಸ್ಥಿತ ಸಂಚು. ಚುನಾವಣೆ ಆಯೋಗವನ್ನು ಯಾರೂ ಪ್ರಶ್ನಿಸದಂತೆ ಕಾನೂನುಗಳನ್ನು ತರಲಾಗಿದೆ. ಚುನಾವಣೆ ಆಯೋಗದ ನೇಮಕತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಲಾಗಿದೆ. ಚುನಾವಣೆ ಆಯೋಗ, ಇಡಿ, ಐಟಿಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಪ್ರಶ್ನಿಸುವ ಅಧಿಕಾರ ಮೊಟಕು ರೂಪಾಯಿ ಮೌಲ್ಯವೂ ನೆಲಕಚ್ಚಿದೆ. ಪಾಕಿಸ್ತಾನ, ಬಾಂಗ್ಲಾದೇಶದ ಎದುರೂ ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿ ಹಾಳಾಗಿ ಹೋದರೂ ಚಿಂತೆಯಿಲ್ಲ. ಬಿಜೆಪಿಯವರಿಗೆ ಚುನಾವಣೆಯನ್ನು ಹೇಗೆ ಗೆಲ್ಲುವುದು ಎನ್ನುವುದೇ ಮುಖ್ಯವಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ಇಲ್ಲಿಲ್ಲ. ನಮ್ಮ ದೇಶದ ಪ್ರಧಾನಮಂತ್ರಿ, ಗೃಹಮಂತ್ರಿಯನ್ನು ಪ್ರಶ್ನಿಸುವ ಅಧಿಕಾರ ಮಾಧ್ಯಮಗಳಿಗಿಲ್ಲ. ಯಾವುದೋ ಒಂದು ಕಾಂಗ್ರೆಸ್ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಬ್ಲಾಕ್ ಮಾಡಲಾಗಿದೆ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಿದರೆ ಅವರ ಖಾತೆಗಳನ್ನೇ ತಡೆ ಹಿಡಿಯಲಾಗುತ್ತಿದೆ ಎಂದರು.

ಮಕ್ಕಳ ಭವಿಷ್ಯಕ್ಕೆ ತೊಂದರೆ

ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಸಾಕುಷ್ಟೂ ಬಾರಿ ಹಗರಣಗಳು ನಡೆದಿವೆ. ನೀಟ್ ವಿಷಯದಲ್ಲಿ ದೇಶದ ಮಕ್ಕಳ ಭವಿಷ್ಯದಲ್ಲಿ ಕೇಂದ್ರ ಚಲ್ಲಾಟವಾಡುತ್ತಿದೆ. ಒಂದು ಕಡೆ ಸೋರಿಕೆಯಾದರೆ ದೇಶದ ಎಲ್ಲ ಮಕ್ಕಳ ಮೇಲೂ ಪರಿಣಾಮವಾಗುತ್ತಿದೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್‌ಗೆ ಬದಲಾಗಿ ಮೊದಲಿನಂತೆ ಸಿಇಟಿ ಬರಲಿ. ಸಿಇಟಿ ರಾಜ್ಯಕ್ಕೆ ಬಿಟ್ಟು ಬಿಡಿ. ನಾವು ಮಾಡಿಕೊಳ್ಳಲು ಸಮರ್ಥರಿದ್ದೇವೆ. ಎಲ್ಲವನ್ನೂ ಯಾಕೆ ಕೇಂದ್ರೀಕೃತ ಮಾಡಬೇಕು. ನಮ್ಮ ರಾಜ್ಯದ ಮಕ್ಕಳ ಹಿತ ಕಾಪಾಡಲು ನಾವು ಸಮರ್ಥರಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಂಪುಟ ಪುನಾರಚನೆ ಶೀಘ್ರ?

ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಎಂಎಲ್‌ಸಿ ಐವನ್ ಡಿಸೋಜಾ ಮಾತನಾಡುತ್ತಾ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಕಾರ್ಯಕ್ರಮದ ಬಳಿಕ ಪಕ್ಷದ ಗೊಂದಲಗಳ ಬಗ್ಗೆ ಸುದ್ದಿಗಾರರು ಕೇಳಿದಾಗ, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ ಏನೆಲ್ಲಾ ಆಗಬಹುದು ಎಂದು ಹೇಳಲಾಗುವುದಿಲ್ಲ. ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಷಯ. ಮುಂದಿನ ತಿಂಗಳು ಆಗಲೂಬಹುದು ಎಂದರು.