ಜಿಲ್ಲೆ

ರಕ್ಷಣೆಗಿರುವ ಕಾನೂನಿನ ಜ್ಞಾನ ಪಡೆದುಕೊಳ್ಳಲಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಕಾನೂನು ಜಾರಿಗೆ ಬಂದಿದೆ. ಇದರ ಬಗ್ಗೆ ಜ್ಞಾನ ಪಡೆದುಕೊಂಡು ಬಳಸಿಕೊಳ್ಳುವುದು ಮುಖ್ಯವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಸಲಹೆ ನೀಡಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾನೂನು ಎಷ್ಟೇ ಕಠಿಣವಾಗಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವೇನೆಂಬುದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಇಂತಹ ದೌರ್ಜನ್ಯ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೆಣ್ಣು ಮಕ್ಕಳು ತಮ್ಮ ರಕ್ಷಣೆಗಿರುವ ಕಾನೂನನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳನ್ನು ತಿಳಿಸುವ ಪ್ರಯತ್ನವನ್ನು ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಾಗಾರದ ಮೂಲಕ ಮಾಡುವುದು ಪ್ರಯೋಜನಕಾರಿ ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ, ಹೆಣ್ಣು ಮಕ್ಕಳು ಸಮಾಜದಲ್ಲಿ ಯಾವ ರೀತಿ ರಕ್ಷಣೆ ಇರಬೇಕೆನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷಿತವಾಗಿರುವುದರ ಬಗ್ಗೆ ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ನಿವೃತ್ತ ಡಿಸಿಪಿ ಎಸ್.ಸಿದ್ದರಾಜು ಮಾತನಾಡಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾಲೇಜಿನ ಪ್ರಾಂಶುಪಾಲ ಗುರುರಾಜಪ್ರಭು, ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷ ರಜನಿರಾಜ್, ಉಪನ್ಯಾಸಕರಾದ ಎಚ್.ಜಿ.ಪುಷ್ಪಲತಾ, ಜ್ಯೋತಿ, ಕುಸುಮಾದೇವಿ, ಕೆ.ಹೇಮಲತಾ ಇತರರಿದ್ದರು.