ನಾಪೋಕ್ಲು: ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಶಿಸ್ತಿನ ಜೀವನ ನಡೆಸಬೇಕು ಎಂದು ಮಡಿಕೇರಿ ವೃತ್ತ ಪೊಲೀಸ್ ನಿರೀಕ್ಷಕ ಅನುಪ್ ಮಾದಪ್ಪ ತಿಳಿಸಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೊಡಗು ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಎಂದಿಗೂ ಅಮಲು ಬರಿಸುವಂತಹ ಪದಾರ್ಥಗಳಿಗೆ ಮಾರುಹೋಗದೆ, ಆರೋಗ್ಯವನ್ನು ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಕಾನೂನು ಅರಿವು ಮುಖ್ಯವಾಗಿದೆ. ಪ್ರತಿಯೊಬ್ಬರೂ ಸಂಚಾರ ನಿಯಮ, ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದು ಮಾಹಿತಿ ನೀಡಿದರು.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಮದ್ಯವ್ಯಸನ, ಸಾಮಾಜಿಕ ಜಾಲತಾಣಗಳಲ್ಲಿರುವ ಆಮಿಷಗಳಿಗೆ ಮರುಳಾಗದೆ ಎಚ್ಚರಿಕೆಯಂದಿರಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮನೋಜ್ ಕುಮಾರ್, ಐಕ್ಯೂ ಸಂಚಾಲಕಿ ಎಸ್.ಆಶಾ, ಬೋಧಕ, ಬೋಧಕೇತರರು ಇದ್ದರು.