ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾರ್ವಜನಿಕರಿಗೆ ಕಾನೂನು ಅರಿವು ಅಗತ್ಯವಿದೆ ಎಂದು ದೇವನಹಳ್ಳಿಯ 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಬಿರಾದಾರ ದೇವಿಂದ್ರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲೂಕಿನ ಬೊಮ್ಮವಾರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ದುಡಿಮೆಗೆ ಕಳುಹಿಸದೆ, ಉತ್ತಮ ಶಿಕ್ಷಣ ಪಡೆಯಲು ಪಾಲಕರು ನೆರವು ನೀಡಬೇಕು ಎಂದು ಹೇಳಿದರು. ಮಕ್ಕಳು ಶಿಕ್ಷಣ ಪಡೆಯುವಾಗ ಅಲಕ್ಷ್ಯ ಮಾಡದೇ, ಶ್ರದ್ಧೆಯಿಂದ ಕಲಿತರೇ ಮಾತ್ರವೇ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ ಎಂದರು. ಇದಲ್ಲದೆ ಮಕ್ಕಳನ್ನು ಅಪಹರಣ ಮಾಡಿ ಭಿಕ್ಷಾಟನೆ, ಇತರೆ ಚಟುವಟಿಕೆಗಳಿಗೆ ಹಾಗೂ ಅಂಗಡಿಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರೆ ಇಂತಹ ಘಟನೆಗಳನ್ನು ಸಾರ್ವಜನಿಕರು ಗಮನಿಸಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು. ಸಂವಿಧಾನದಲ್ಲಿ ಮಕ್ಕಳಿಗಾಗಿ ಇರುವ ಕಾಯ್ದೆಗಳು, ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಮಕ್ಕಳ ಬೆಳವಣಿಗೆ ಕುಂಠಿತ: ಮಕ್ಕಳನ್ನು ಚಿಕ್ಕವಯಸ್ಸಿಗೆ ಕೆಲಸಕ್ಕೆ ಹಾಕಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮು ಮಲ್ಲಯ್ಯ ಹೇಳಿದರು. ಮಕ್ಕಳನ್ನು ವಯೋಸಹಜವಾಗಿ ಆಟವಾಡಲು ಶಿಕ್ಷಣ ಪಡೆಯಲು ಸಹಕರಿಸಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಬಾಲಕಾರ್ಮಿಕ ಇಲಾಖೆಯೂ ಅನೇಕ ರೀತಿ ಕೆಲಸ ಮಾಡುತ್ತಿದೆ. ಈ ಇಲಾಖೆ ಜತೆಗೆ ಎಲ್ಲ ಇಲಾಖೆಗಳು ಬಾಲ ಕಾರ್ಮಿಕ ಪದ್ಧತಿ ತಡೆಯಲು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು: ಪ್ರತೀ ಪಾಲಕರು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕೆಲಸಕ್ಕೆ ಕಳುಹಿಸದೇ, ಶಿಕ್ಷಣವನ್ನು ಕೊಡಿಸಲು ಶಾಲೆಗಳಿಗೆ ಕಳುಹಿಸುವ ಮೂಲಕ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ಮಕ್ಕಳು ಸಹ ಶಾಲೆ ಬಿಟ್ಟು, ದುಡಿಮೆಗೆ ಹೋಗಬಾರದು. ಒಳ್ಳೆಯ ರೀತಿ ವಿದ್ಯಾಭ್ಯಾಸ ಮಾಡುವ ಮೂಲಕ ಉನ್ನತ ಮಟ್ಟದ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.