ಜಿಲ್ಲೆ

ಸಂಚಾರ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

ಲಕ್ಷ್ಮೇಶ್ವರ: ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸಿನ ಮಕ್ಕಳು ವಾಹನ ಚಾಲನೆ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಚಾಲಕನಿಗೆ ಹಾಗೂ ವಾಹನ ಮಾಲೀಕನಿಗೂ ದಂಡ ವಿಧಿಸಲಾಗುತ್ತದೆ ಎಂದು ಪಿಎಸ್‌ಐ ವಿ.ಜಿ. ಪವಾರ ಹೇಳಿದರು.

ಶಿಗ್ಲಿ ಗ್ರಾಮದ ಕೆ.ಜಿ. ಮುದಗಲ್ಲ ಪ್ರೌಢಶಾಲೆ, ಜಿ.ಎಫ್. ಉಪನಾಳ ಹಿರಿಯ ಪ್ರಾಥಮಿಕ ಶಾಲೆ, ಎಸ್.ಎ. ಹುಲಗೂರ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ರಸ್ತೆ ಸಂಚಾರ ನಿಯಮಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹದಿನೆಂಟು ವರ್ಷ ತುಂಬಿದ ಮಕ್ಕಳು ವೇಗದ ಚಾಲನೆ ಮಾಡಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ನಿಗದಿತ ಜನಕ್ಕಿಂತ ಹೆಚ್ಚಿನ ಜನ ಪ್ರಯಾಣ ಮಾಡುವದು ಸಹ ಅಪರಾಧವಾಗಿದೆ. ವಾಹನ ಚಾಲನೆ ಪರವಾನಿಗೆ, ವಾಹನದ ಇನ್ಶೂರೆನ್ಸ್ ಮಾಡಿಸುವುದು ಮುಖ್ಯವಾಗಿದೆ. ವಾಹನ ಸವಾರರು ಸಂಚಾರ ನಿಯಮ ಪಾಲಿಸುವುದರ ಜತೆಗೆ ಇತರರಿಗೂ ಜಾಗೃತಿ ಮೂಡಿಸಬೇಕು ಎಂದರು.

ಶಿಗ್ಲಿ ಗ್ರಾಮದ ಬೀಟ್ ಹವಾಲ್ದಾರ ಪ್ರಕಾಶ ಮ್ಯಾಗೇರಿ ಮಾತನಾಡಿ, ವಿವಿಧೆಡೆ ಮನೆಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಬಂಗಾರದ ಆಭರಣಗಳನ್ನು ತೊಳೆದು ಹೊಸ ರೂಪ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡುವವರು ನಿಮ್ಮ ಮನೆ ಬಾಗಿಲಿಗೆ ಬರಬಹುದು. ಆದ್ದರಿಂದ ಮನೆಯ ಮುಂದೆ ಸಿಸಿ ಕ್ಯಾಮರಾ ಅಳವಡಿಸಿಕೊಂಡರೆ ಯಾವುದೇ ಅಹಿತಕರ ಚಟುವಟಿಕೆ ನಡೆದಾಗ ಕಳ್ಳರನ್ನು ಹಿಡಿಯಲು ಸಹಾಯವಾಗುತ್ತದೆ ಎಂದರು.

ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ, ವಿ.ಸಿ. ಬೆಂಡಿಗೇರಿ, ಟಿ.ಎಸ್. ಹೂಗಾರ, ಜೆ.ಎಸ್. ಕರಜಗಿ, ವಿ.ಎ. ಪಾಟೀಲ, ಎಂ.ಎಂ. ಹೆಬ್ಬಳ್ಳಿ, ಎಂ.ಜಿ. ಯಲವಗಿ ಎಂ.ಎಚ್. ಪಾಟೀಲ ಇತರರಿದ್ದರು. ಆನಂದ ತಿಮ್ಮಾಪುರ ಸ್ವಾಗತಿಸಿದರು. ಎಂ.ಬಿ. ಕಲ್ಲೂರ ವಂದಿಸಿದರು.