ರಟ್ಟಿಹಳ್ಳಿ: ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ರಮೇಶ ಪಿ.ಎಸ್. ಹೇಳಿದರು.
ಪಟ್ಟಣದ ನೋಬಲ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಅಪ್ರಾಪ್ತರು, 18 ವರ್ಷದೊಳಗಿನವರು ವಾಹನಗಳನ್ನು ಹೆಚ್ಚಾಗಿ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. 18 ವರ್ಷದೊಳಗಿನವರು ವಾಹನ ಚಲಾಯಿಸಿದ್ದು ಕಂಡುಬಂದರೆ ಆ ವಾಹನದ ಮಾಲೀಕರಿಗೆ 25 ಸಾವಿರ ರೂ. ದಂಡ ಹಾಗೂ 6 ತಿಂಗಳು ಶಿಕ್ಷೆ ವಿಧಿಸಲಾಗುವುದು. 18 ವರ್ಷ ಮೇಲ್ಪಟ್ಟವರು ವಾಹನ ಚಾಲನೆ ಪರವಾನಗಿ ಪತ್ರ, ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಸವಾರಿ ಮಾಡಬೇಕು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿರಬೇಕು ಎಂಬಿತ್ಯಾದಿ ನಿಯಮಗಳನ್ನು ತಿಳಿಸಿದರು.
ಜಾಗೃತಿ ನಾಮಫಲಕಗಳ ಅಳವಡಿಕೆ: ಪಟ್ಟಣದ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಭಗತ್ ಸಿಂಗ್ ವೃತ್ತ, ಸಂಗೋಳಿ ರಾಯಣ್ಣ ವೃತ್ತ, ಶಿವಾಜಿ ನಗರ ಸೇರಿ ವಿವಿಧೆಡೆ ಸಂಚಾರಿ ನಿಯಮಗಳ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸುವಾಗ ಮೊಬೈಲ್ಫೋನ್ನಲ್ಲಿ ಮಾತನಾಡಬಾರದು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಸೇರಿದಂತೆ ವಿವಿಧ ಜಾಗೃತಿ ಮೂಡಿಸುವ ಸಂದೇಶಗಳನ್ನು ಭಾವಚಿತ್ರಗಳೊಂದಿಗೆ ನಾಮಫಲಕಗಳನ್ನು ಅಳವಡಿಸಲಾಗಿದೆ ಎಂದು ಪಿಎಸ್ಐ ರಮೇಶ ಪಿ.ಎಸ್. ತಿಳಿಸಿದರು.
ಎಎಸ್ಐ ಅಶೋಕ ಕೊಂಡ್ಲಿ, ಮುಖ್ಯ ಶಿಕ್ಷಕಿ ನಾಗರತ್ನ ಪಾಟೀಲ, ಪ್ರಾಚಾರ್ಯ ಜಗದೀಶ ಪೂಜಾರ, ಶಿಕ್ಷಕಿ ರಹೀಮಾ ಕೋಟಿ ಇತರರು ಉಪಸ್ಥಿತರಿದ್ದರು.