ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಚಿವ ಎಂ.ಬಿ. ಪಾಟೀಲ ಜನತಾ ದರ್ಶನ ನಡೆಸಿದರು. 
ಜಿಲ್ಲೆ

ಜನತಾ ದರ್ಶನದಲ್ಲಿ ಅಧಿಕಾರಿಗಳ ಲೆಫ್ಟ್‌ರೈಟ್, ಆರ್ ಆಂಡ್ ಆರ್‌ನಲ್ಲಿ ಆಸ್ತಿ ಅಕ್ರಮ ಪರಭಾರೆ, ಸಚಿವ ಎಂ.ಬಿ. ಪಾಟೀಲ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ?

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಲ್ಲಿ ಸಾಕಷ್ಟು ಅವಾಂತರ ನಡೆದಿದೆ. ಸಂತ್ರಸ್ತರ ಆಸ್ತಿ ಅಕ್ರಮವಾಗಿ ಬೇರೊಬ್ಬರಿಗೆ ಪರಭಾರೆ ಮಾಡುತ್ತಿದ್ದು, ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳನ್ನು ಲೆಫ್ಟ್‌ರೈಟ್ ತೆಗೆದುಕೊಂಡರು.

ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಲ್ಲಿ ಕುಂಬಾರ ಎಂಬಾತ ನೂರಾರು ಜನರ ಹೆಸರಲ್ಲಿ ಬೋಗಸ್ ಮಾಡಿ ಜೈಲಿಗೆ ಹೋಗಿದ್ದಾನೆ. ಇದೀಗ ಬಂದು ಮತ್ತೆ ಅದೇ ಕೆಲಸ ಆರಂಭಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈನಾಪುರದಲ್ಲಿ ಆಸ್ತಿ ಮುಳುಗಡೆಯಾಗಿವೆ. ಆ ಸಂತ್ರಸ್ತರಿಗೆ ವಿಜಯಪುರದಲ್ಲಿ ಪುನರ್ ವಸತಿ ಕೇಂದ್ರ ಸ್ಥಾಪಿಸಿದರೆ ಅದರಲ್ಲಿ ಭೂ ಮಾಫಿಯಾದ ಒಬ್ಬ ಯಾರದ್ದೋ ಆಸ್ತಿ ಇನ್ನಾರಿಗೋ ಖರೀದಿ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಪ್ರತ್ಯೇಕ ಸಭೆ ಮಾಡುವೆ ಎಂದರು.

ನೋಂದಣಿ ಇಲಾಖೆಯಲ್ಲಿ ಅನವಶ್ಯಕವಾಗಿ ತೊಂದರೆಯುಂಟು ಮಾಡಿ ಹಣ ಹೊಡೆಯುವ ದಂಧೆ ನಡೆದಿದೆ. ಬಸವನಾಡಿನಲ್ಲಿ ಇಂಥ ದಂಧೆ ನಡೆಯುವುದ್ಲಿ. ಪಾಪ ಮುಳುಗಡೆಯಾಗಿರುವ ಆಸ್ತಿ ಕೂಡ ಬಿಡುತ್ತಿಲ್ಲವೆಂದರೆ ಹೇಗೆ? ಸುಮ್ಮ ಸುಮ್ಮನೇ 20 ಆಸ್ತಿಗಳ ಅವ್ಯವಹಾರ ನಡೆದಿದೆ ಎಂದು ಅಸಮಾಧಾನ ಹೊರಹಾಕಿದರು.

ಎಡಿಎಲ್ಆರ್ ಇಲಾಖೆಯಲ್ಲಿ ಅರ್ಜಿ ವಿಲೇವಾರಿಯಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ಖುದ್ದು ನಾನೇ ಹೇಳಿದರೂ ಪರಿಸ್ಥಿತಿ ಹೀಗಾದರೆ ಸಾರ್ವಜನಿಕರ ಸ್ಥಿತಿ ಹೇಗಿರಬೇಡ ಎಂದರು.

ಪೊಲೀಸ್ ಇಲಾಖೆಯಲ್ಲಿ ಗನ್ ಪರವಾನಿಗೆ ಕೂಡ ಸುಮ್ಮನೇ ಪೆಂಡಿಂಗ್ ಇಟ್ಟುಕೊಂಡಿದ್ದೀರಿ. ನ್ಯಾಯಯುತ ಅರ್ಜಿ ವಿಲೇವಾರಿ ಮಾಡಿ. ಹಾಗಂತ ಗುಂಡಾಗಳಿಗೆ, ಭೂ ಮಾಫಿಯಾದವರಿಗೆ ಗನ್ ಪರವಾನಗಿ ಕೊಡಬೇಡಿ ಎಂದು ಎಸ್‌ಪಿ ಋಷಿಕೇಶ ಸೋನಾವನೆಗೆ ಸೂಚಿಸಿದರು.

ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಎಂ.ಬಿ. ಪಾಟೀಲರು, ಶಾಲೆ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಶಾಲೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸಿ ಎಂದರು.

ರಾಜ್ಯದಲ್ಲಿ ಭೀಕರ ಬರ ಇದೆ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಪಿಡಿಒ ಮೂಲಕ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ ಎಂದರು.

ಶಾಸಕ ವಿಠಲ ಕಟಕದೋಂಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿಚರ್ಡ್ ವಿನ್ಸಂಟ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಪಂ ಉಪ ಕಾರ್ಯದರ್ಶಿ ಆಜೂರ ಮತ್ತಿತರರಿದ್ದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ನಿರ್ವಹಿಸಿದರು.