ಜಿಲ್ಲೆ

ನಟಿ ಲೀಲಾವತಿ ಸೇವೆ ಸ್ಮರಣೀಯ

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಚಿತ್ರರಂಗದಲ್ಲಿ ನಟಿ ಲೀಲಾವತಿ ಅನನ್ಯ ಸಾಧನೆ ಮಾಡಿದ ಅಭಿನೇತ್ರಿ ಎಂದು ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ನಟಿ ಲೀಲಾವತಿ ಹಾಗೂ ಅಂಬಾರಿ ಆನೆ ಅರ್ಜುನನಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದರು.
ಅಪ್ರತಿಮ ಕಲಾವಿದೆ ಲೀಲಾವತಿ ಚಿತ್ರರಂಗದಲ್ಲಿ ಅಮ್ಮ ಎಂದೇ ಖ್ಯಾತರಾಗಿದ್ದರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆ ಸ್ಮರಣೀಯ ಎಂದರು. ಮನೋಜ್ಞ ಅಭಿನಯದ ಮೂಲಕ ಅವರು ಎಂದೆಂದಿಗೂ ಜೀವಂತವಾಗಿ ಇರಲಿದ್ದಾರೆ ಎಂದರು. ಚಲನಚಿತ್ರರಂಗ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳನ್ನೂ ಮಾಡಿದ್ದ ಲೀಲಾವತಿ ಅವರ ಸಾಧನೆ ದೊಡ್ಡದು ಎಂದು ಲೋಕೇಶ್ ಹೇಳಿದರು.
ದಸರಾ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಸೇವೆಯೂ ನಾಡಿಗೆ ದೊಡ್ಡದು ಎಂದು ಅವರು ಸ್ಮರಿಸಿದರು.
ಕನ್ನಡಪರ ಹೋರಾಟಗಾರ ಪುಟ್ಟಣ್ಣ ಗೋಕಾಕ್ ಮಾತನಾಡಿ, ಕನ್ನಡ, ತಮಿಳು ಮತ್ತು ತೆಲುಗು ಚಲನ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ಮನೆ ಮಾತಾಗಿದ್ದರು.50 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ವೃತ್ತಿ ಜೀವನದುದ್ದಕ್ಕೂ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಮೂರು ದಶಕದ ಹಿಂದೆ ರಾಜ್ಯದಲ್ಲಿ ಬರಗಾಲ ಆವರಿಸಿದ್ದಾಗ ಪಟ್ಟಣಕ್ಕೆ ಚಿತ್ರ ತಂಡದೊಂದಿಗೆ ಆಗಮಿಸಿದ್ದ ಲೀಲಾವತಿ, ಪುರಸಭೆಯ ಮುಂಭಾಗದ ಉದ್ಯಾನವನದಲ್ಲಿ ಹಣ ಸಂಗ್ರಹಿಸಿ ಸಂಕಷ್ಟದಲ್ಲಿದ್ದ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಕಸಾಪ ಪದಾಧಿಕಾರಿಗಳಾದ ಯಶೋದಾ ಜೈನ್, ಪ್ರಕಾಶ್, ಶಿವನಗೌಡ ಪಾಟೀಲ ಮಾತನಾಡಿದರು. ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಆನಂದ್ ಕಾಳೇನಹಳ್ಳಿ, ಶೋಭಾ, ಸುಜಾತಾ ಸತ್ಯನಾರಾಯಣ್, ಕೃಷ್ಣಮೂರ್ತಿ ಇತರರು ಇದ್ದರು.