ಮಡಿಕೇರಿ:
ನಗರದ ರಸ್ತೆಗಳ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸಕ್ತಿ ಇಲ್ಲವೆಂದು ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಸ್ತೆಗಳ ದುರಸ್ತಿಗೆಂದು ಭೂಮಿಪೂಜೆ ನಡೆದು ಗುದ್ದಲಿ ಸವಿಯಿತೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಡಾಂಬರೀಕರಣ ಕಾರ್ಯ ನಡೆಯುತ್ತಿಲ್ಲ. ನಗರಸಭೆಯ ೨೩ ವಾರ್ಡ್‌ಗಳ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಅನುದಾನ ಲಭಿಸುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗುಂಡಿ ಬಿದ್ದ ರಸ್ತೆಗಳಿಂದ ಅಪಾಯ ಎದುರಾಗುತ್ತಿದೆ, ಕೆಲವು ಬಡಾವಣೆಗಳಲ್ಲಿ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ.
ನಿರಂತರ ಭೂಮಿಪೂಜೆ ಮಾಡುವ ಮೂಲಕ ಜನರ ಕಣ್ಣೊರೆಸುವ ತಂತ್ರ ಅನುಸರಿಸಲಾಗುತ್ತಿದೆ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ರಸ್ತೆಗಳು ಹೀನಾಯ ಸ್ಥಿತಿಯಲ್ಲಿರುವುದರಿಂದ ಪ್ರವಾಸಿಗರು ಕೂಡ ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ, ಕಾಮಗಾರಿ ಯಾವ ಗುಣಮಟ್ಟದಲ್ಲಿದೆ ಎಂದು ಪರಿಶೀಲಿಸುತ್ತಿಲ್ಲ. ಜನಹಿತ ಮರೆತು ಪಕ್ಷ ಸಂಘಟನೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.