ಹುಬ್ಬಳ್ಳಿ :ಇಲ್ಲಿನ ಆಶಾ ಮಧುಮೇಹ ಸಂಸ್ಥೆಯ 16ನೇ ವಾರ್ಷಿಕೋತ್ಸವ ಅಂಗವಾಗಿ ಸಂಸ್ಥೆ ವತಿಯಿಂದ ಪ್ರತಿ ತಿಂಗಳು 2-3 ಕಾಲೇಜುಗಳಲ್ಲಿ ಮಧುಮೇಹ ಜಾಗೃತಿ ಉಪನ್ಯಾಸಗಳನ್ನು ಹಾಗೂ ನವೆಂಬರ್ 14ರಿಂದ 16ರವರೆಗೆ ಮಧುಮೇಹದಿಂದ ಉಂಟಾಗುವ ತೊಂದರೆಗಳ ಮಾಹಿತಿ ಪ್ರದರ್ಶನ ಆಯೋಜಿಸಲಾಗಿದೆ.
ಮಧುಮೇಹ ರಕ್ತ ತಪಾಸಣೆ ಹಾಗೂ ಮಾಹಿತಿಯ ಕರಪತ್ರಗಳನ್ನು ಸಹ ಅದೇ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಬಿ. ಸತ್ತೂರ ತಿಳಿಸಿದ್ದಾರೆ.
ಅಮೆರಿಕದ ಸೆಮಿಟಾನ್ ಕೃತಕ ಬುದ್ಧಿಮತ್ತೆ ಸಂಸ್ಥೆಯ ಅಧ್ಯಕ್ಷ ಡಾ. ಸಂದೀಪ ದ್ರೋಣಾವತ್ ಅವರ ತಾಯಿ ಆಶಾ ದ್ರೋಣಾವತ್ ಹೆಸರಿನಲ್ಲಿ 2017ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಹುಬ್ಬಳ್ಳಿಯ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್ ಹಾಗೂ ಮತ್ತಿತರೆಡೆ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಜನರ ಮಧುಮೇಹ ತಪಾಸಣೆ ಮಾಡಿ, ಮಧುಮೇಹ ಜಾಗೃತಿ ಕರಪತ್ರಗಳನ್ನು ವಿತರಿಸಿದೆ. 2019ರಲ್ಲಿ 75 ಸಾವಿರಕ್ಕೂ ಹೆಚ್ಚು ಜನರ ರಕ್ತದೊತ್ತಡ ತಪಾಸಣೆ ಮಾಡಿ, 150ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿದೆ.
ಸಂಸ್ಥೆಯ ನೂತನ ಟ್ರಸ್ಟಿಗಳನ್ನಾಗಿ ಉದ್ಯಮಿ ಮಹಾದೇವ ಕರಮರಿ ಹಾಗೂ ಸೆಮಿಟಾನ್ ಸಂಸ್ಥೆಯ ಕಾರ್ಯನಿರ್ವಾಹಕ ಸಲೊನಿ ದ್ರೋಣಾವತ್ ಅವರನ್ನು ನೇಮಿಸಲಾಯಿತು.
ಡಾ. ಜಿ.ಬಿ. ಸತ್ತೂರ, ಡಾ. ಸಂದೀಪ ದ್ರೋಣಾವತ್, ಟ್ರಸ್ಟಿಗಳಾದ ಮಹೇಂದ್ರ ವಿಕಮ್ಸಿ, ಜಿತೇಂದ್ರ ಮಜೇಥಿಯಾ, ಜೆ.ಸಿ. ಮಠದ, ಡಾ. ವಿ.ಎಸ್.ವಿ. ಪ್ರಸಾದ, ಕೇಶವ ದೇಸಾಯಿ ಹಾಜರಿದ್ದರು.