ಜಿಲ್ಲೆ

ಗ್ಯಾರಂಟಿಯಿಂದ ಉಪನ್ಯಾಸಕರ ನೇಮಕ ಸಾಧ್ಯವಾಗುತ್ತಿಲ್ಲ: ಟೀಕೆ

ಆರ್.ಕೃಷ್ಣ

ಮೈಸೂರು: ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸುವ ಸಲುವಾಗಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ತುಂಬಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ವಿವೇಕಾನಂದ ಟೀಕಿಸಿದರು.

ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಮೈಸೂರು ಜಿಲ್ಲಾ ಘಟಕದಿಂದ ಡಿ.ಬನುಮಯ್ಯ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ವಿಭಾಗೀಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನುದಾನಿತ ಕಾಲೇಜುಗಳಲ್ಲಿ ದುಡಿಯುವ ನೌಕರರು ಅನಾರೋಗ್ಯಕ್ಕೆ ಒಳಗಾಗಿ ಪಡೆದ ಚಿಕಿತ್ಸೆ ವೆಚ್ಚವನ್ನು ಸಮರ್ಪಕವಾಗಿ ಪಾವತಿಸುತ್ತಿಲ್ಲ. ಕೆಲವೊಂದು ಪ್ರಕರಣದಲ್ಲಿ 94 ಲಕ್ಷ ರೂ. ವೈದ್ಯಕೀಯವೆಚ್ಚವಾಗಿದ್ದರೂ ಸರ್ಕಾರ ಕೇವಲ 3 ಲಕ್ಷ ರೂ. ಮಾತ್ರ ನೀಡಿದೆ ಎಂದರು.

ಸರ್ಕಾರದಲ್ಲಿ ಈಗ ಹಣವಿಲ್ಲ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ನೇಮಕ ಪ್ರಕ್ರಿಯೆಯನ್ನೇ ಕೈ ಬಿಟ್ಟಿದೆ. ಇದರಿಂದ ಸಮಾರು 65 ಸಾವಿರ ಉಪನ್ಯಾಸಕರ ಹುದ್ದೆ ಖಾಲಿ ಇದ್ದು ನೇಮಕ ಮಾಡಿಕೊಳ್ಳುತ್ತಿಲ್ಲ. ಅತಿಥಿ ಉಪನ್ಯಾಸಕರಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ ಎಂದು ಟೀಕಿಸಿದರು.

ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಲಕ್ಷಾಂತರ ರೂ. ಹಣ ನೀಡಬೇಕಿದೆ. ಇಂತಹ ಅವ್ಯವಸ್ಥೆಗಳನ್ನು ದೂರಗೊಳಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕಿದೆ ಎಂದರು.

ಅನುದಾನಿತ ಕಾಲೇಜಿನ ಉಪನ್ಯಾಸಕರು ಸರ್ಕಾರಿ ರಜೆಯಾದ 2ನೇ ಹಾಗೂ 4 ನೇ ಶನಿವಾರದಂದು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಹಾಗಾಗಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಎಲ್ಲರಂತೆ ಉಪನ್ಯಾಸಕರಿಗೂ ರಜೆ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ.ಎನ್.ಹರೀಶ್ ಮಾತನಾಡಿ, 2024ರ ಅನುದಾನಿತ ಶಿಕ್ಷಣ ಮಸೂದೆಯಲ್ಲಿ ತಂದಿರುವ ಕೆಲವು ಬದಲಾವಣೆಗಳಿಂದಾಗಿ ಉಪನ್ಯಾಸಕರಿಗೆ ಸಂದಿಗ್ಧ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ದೂರಿದರು.

ಶೂನ್ಯ ದಾಖಲಾತಿ ಕಾರಣ ಹಾಸನದಿಂದ ಮಂಡ್ಯದ ಭಾರತಿನಗರ ಕಾಲೇಜಿಗೆ ಉಪನ್ಯಾಸಕರು, ನೌಕರರನ್ನು ವರ್ಗಾವಣೆ ಮಾಡಲಾಯಿತು. ಆದರೆ, ವರ್ಗಾವಣೆಯಾದ ಎಂಟು ತಿಂಗಳ ನಂತರ ವೇತನ ನೀಡಲಾಗಿದೆ. ಅವರಿಗೆ ನೀಡಬೇಕಾದ ಭತ್ಯೆಗಳು ಸಮರ್ಪಕವಾಗಿ ದೊರೆತಿಲ್ಲ. ರಾಜ್ಯದ 821 ಕಾಲೇಜಿನ ಅಧ್ಯಾಪಕರು ಸಂಘಟನಾತ್ಮಕ ಶಕ್ತಿಯಿಂದ ಹೋರಾಟ ಮಾಡಿದರೆ ಮಾತ್ರ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾಲೇಜು ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ, ಹೊಸ ಕಾಲೇಜುಗಳ ಆರಂಭಿಸಲು ಅನುಮತಿ ನೀಡುವಾಗ ಸುತ್ತ ಮುತ್ತಲ ಕಾಲೇಜುಗಳ ಸ್ಥಿತಿಗತಿ ಪರಿಶೀಲಿಸಬೇಕಿದೆ ಎಂದು ಹೇಳಿದರು.

ವಿಧಾನಪರಿಷತ್ತಿನ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿದರು. ಮಾನ್ಯತೆ ಮತ್ತು ಅನುದಾನಿತ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಟಿ.ಆರ್. ಸಿದ್ದರಾಜು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚಲುವಯ್ಯ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗ ಸಹಾಯಕ ನಿರ್ದೇಶಕ ನಿರಂಜನಮೂರ್ತಿ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ್, ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಚಂದ್ರಶೇಖರ್, ಅಧ್ಯಕ್ಷ ಪಿ.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಮಲ್ಲಪ್ಪ ಇತರರು ಇದ್ದರು.