ಜಿಲ್ಲೆ

ಕನ್ನಡ ಪ್ರಜ್ಞಾ ವಲಯ ವಿಸ್ತರಣೆಯಲ್ಲಿ ಶೇಕ್ಸ್ ಪಿಯರ್ ನಾಟಕಗಳ ಪಾತ್ರ ಹಿರಿದು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡಿಗರು ಶೇಕ್ಸ್ಪಿಯರ್‌ನ ನಾಟಕಗಳನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದರು. ಕನ್ನಡದ ಪ್ರಜ್ಞಾವಲಯವನ್ನು ವಿಸ್ತರಿಸುವಲ್ಲಿ ಶೇಕ್ಸ್ ಪಿಯರ್ ನಾಟಕಗಳು ಮಹತ್ವದ ಪಾತ್ರ ವಹಿಸಿದವು. ರೂಪಾಂತರದ ಮೂಲಕ ಶೇಕ್ಸ್ ಪಿಯರ್ ನಾಟಕಗಳನ್ನು ದಕ್ಕಿಸಿಕೊಳ್ಳಲು ಕನ್ನಡ ಭಾಷೆ ಪ್ರಯತ್ನಿಸಿತು ಎಂದು ರಾಯಚೂರಿನ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನಿ ಹೇಳಿದರು.

ನಗರದ ಬೇಂದ್ರೆ ಭವನದಲ್ಲಿ ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್ ಮತ್ತು ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಧಾರವಾಡ ಕಟ್ಟೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶೇಕ್ಸ್ ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ನವೋದಯ ಪೂರ್ವ ಕಾಲ ಘಟ್ಟದಲ್ಲಿ ಕನ್ನಡ ಸಾಹಿತ್ಯ ರೂಪುಗೊಳ್ಳಲು ಇಂಗ್ಲಿಷ್ ಕೃತಿಗಳ ಅನುವಾದ ಮಹತ್ವದ ಪಾತ್ರ ನಿರ್ವಹಿಸಿತು.  ಶೇಕ್ಸ್ ಪಿಯರ್ ನ ನಾಟಕಗಳು ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದವು. ನಾಟಕಗಳ ವಸ್ತು, ಸಂವೇದನೆ, ಭಾಷೆ, ಶೈಲಿ ಕನ್ನಡ ಸಾಹಿತ್ಯದ ಸಾಧ್ಯತೆಗಳನ್ನು ಹೆಚ್ಚಿಸಿದವು ಎಂದರು.

ಸಾಹಿತಿಗಳಾದ ಆರ್.ಜಿ. ಹೆಗಡೆ, ವೆಂಕಟಗಿರಿ ದಳವಾಯಿ, ಪ್ರೊ. ಬಸವರಾಜ ಡೋಣೂರ, ವಿಜಯಕುಮಾರ ಕಟಗಿಹಳ್ಳಿಮಠ, ಡಿ.ಎಂ. ಹಿರೇಮಠ ಮಾತನಾಡಿದರು. ಸಿವಿಜಿ ಚಂದ್ರು, ಶ್ರೀನಿವಾಸ ವಾಡಪ್ಪಿ, ಬಸಯ್ಯ ಶಿರೋಳ, ಡಿ.ಬಿ. ಕರಡೋಣಿ, ಮುಕುಂದ ಲಮಾಣಿ, ಪಿ.ಎ. ಪೊಲೀಸ್‌ಪಾಟೀಲ, ಅರವಿಂದ ಯಾಳಗಿ, ಸಂಗಪ್ಪ ಮುದೇನೂರ, ಇತರರಿದ್ದರು.

ವಿಜಯಲಕ್ಷ್ಮೀ ದಾನರಡ್ಡಿ ನಿರೂಪಿಸಿದರು. ಪ್ರಶಾಂತ ಮಂಡ್ರೆ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ನಿರ್ವಹಿಸಿದರು.