ಮಂಡ್ಯ: ಸ್ವಾಮಿ ವಿವೇಕಾನಂದ ಅವರ ವ್ಯಕ್ತಿತ್ವ ಮತ್ತು ಸಂದೇಶಗಳು ಜಗತ್ತಿಗೆ ದಿಕ್ಸೂಚಿ ಎಂದು ಎಸ್.ಬಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಕೆರೆಯಂಗಳ ಕೆ.ಎಚ್.ಬಿ.ಬಡಾವಣೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ವಿವೇಕ ಬೆಳಕು-ಯುವ ಜನತೆಗೊಂದು ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ ಕುಲಕ್ಕೆ ಶಿಕ್ಷಣ ಮತ್ತು ವ್ಯಕ್ತಿತ್ವ ಹೇಗಿರಬೇಕು ಎಂದು ವಿವೇಕದ ಬೆಳಕು ತೋರಿದ ಮಹಾನ್ ಸನ್ಯಾಸಿಯನ್ನು ಜಗತ್ತು ಮರೆಯದು. ಈ ವಿಶ್ವಕ್ಕೆ ಭಾರತ ಆಧ್ಯಾತ್ಮಿಕತೆ, ಸಂಸ್ಕಾರ, ಸಂಸ್ಕೃತಿಯನ್ನು ಪರಿಚಯ ಮಾಡಿದರು. ವಿದ್ಯಾಭ್ಯಾಸ ಬಗ್ಗೆ ಸಾಕಷ್ಟು ವಿವೇಕಗಳನ್ನು ತಿಳಿಸಿದ್ದಾರೆ ಎಂದು ನುಡಿದರು.
ನಮ್ಮಲ್ಲಿರುವ ಅಂತರ್‌ಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣದ ಗುರಿಯಾಗಿದೆ. ಮುಂದೆ ಏನಾಗಬೇಕು ಎನ್ನುವ ಗುರಿ ಇರಿಸಿಕೊಂಡು ಓದುತ್ತಿರುವ ವಿದ್ಯಾರ್ಥಿಗಳು ಗುರಿ ತಲುಪುವತನಕ ಸಾಧನೆ ಮಾಡಬೇಕೆಂದು ವಿವೇಕಾಂದರು ಹೇಳುತ್ತಿದ್ದರು ಎಂದು ಸ್ಮರಿಸಿದ ಅವರು, ಇಂದಿನ ವಿದ್ಯಾವಂತರು ಉದ್ಯೋಗದ ಗುರಿ ಇರಿಸಿಕೊಂಡು ಅಭ್ಯಾಸ ಮಾಡಬೇಕು. ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು, ಡಾಕ್ಟರ್, ಇಂಜಿನಿಯರ್ ಹೀಗೆ ಹತ್ತು ಹಲವು ಹುದ್ದೆಗಳ ಆಯ್ಕೆ ವಿಷಯಗಳನ್ನು ಓದಿ ಗುರಿ ಮಟ್ಟುಬೇಕು ಎಂದು ಸಲಹೆ ನೀಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಭಗವತ್ಸೇವಕ ಬ್ರಹ್ಮಚಾರಿ ಮಂಜುನಾಥ್, ಸ್ವಾಮಿ ವಿವೇಕಾನಂದ ಅವರು ಹೆಣ್ಣುಮಕ್ಕಳ ಅಭ್ಯುದಯಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಹೆಣ್ಣೊಂದು ಕಲಿತರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದರು ಎಂದು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ, ಸಂಪನ್ಮೂಲ ವ್ಯಕ್ತಿ ರಮೇಶ್ ಉಮರಾಣಿ, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಎಂ.ಟಿ.ಶ್ರೀನಿವಾಸ್, ಪತ್ರಕರ್ತ ಶ್ರೀಪಾದು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ ಮತ್ತಿತರರಿದ್ದರು.
ಕರಡಗೆರೆ ಮಾರುತಿ ಪ್ರಸನ್ನ ನೇಗಿಲ ಯೋಗಿ ಮಹಿಳಾ ತಂಡದಿಂದ ಡೊಳ್ಳುಕುಣಿತ ಪ್ರದರ್ಶನ ನಡೆಯಿತು.