ಜಿಲ್ಲೆ

ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತ: ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ವಾಹನ ಸವಾರರು ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಬೇಕು. ಆದರೆ ಹಲವರು ನಿಯಮ ಉಲ್ಲಂಘನೆ ಮಾಡುತ್ತಿರುವ ಪರಿಣಾಮ ಅಪಘಾತಗಳು ಸಂಭವಿಸುತ್ತಿವೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೆಂಜರ್ಸ್ ಘಟಕ, ಮನೋವಿಜ್ಞಾನ ವಿಭಾಗ, ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪೂರ್ವ ಪೊಲೀಸ್ ಠಾಣೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆ ಮತ್ತು ಮಕ್ಕಳು ಎದುರಿಸುತ್ತಿರುವ ದೌರ್ಜನ್ಯ, ಮಾದಕ ವ್ಯಸನ ಮತ್ತು ಸಂಚಾರ ನಿಯಮದ ಉಲ್ಲಂಘನೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಜಿಲ್ಲೆಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ ಸಾರ್ವಜನಿಕರು ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ. ವಾಹನದಲ್ಲಿ ಚಲಿಸುತ್ತಲೇ ಧೂಮಪಾನ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುವುದು ಅಪಘಾತಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲದೆ ಸುಗಮ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತದೆ. ಪ್ರಸ್ತುತ ದಿನದಲ್ಲಿ ಮಾದಕ ವ್ಯಸನಕ್ಕೆ ಶೇ.15ರಷ್ಟು ಯುವ ಸಮೂಹ ಬಲಿಯಾಗಿದೆ. ಈ ವ್ಯಸನವನ್ನು ಹೋಗಲಾಡಿಸಬೇಕಾದರೆ ಧ್ಯಾನ, ಯೋಗ ಸೇರಿದಂತೆ ಉತ್ತಮ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಎ.ಜಾಯ್ ಅಂತೋನಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿದೆ. ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಯುವತಿಯರು ಇಂತಹ ಅನಿಷ್ಟ ಪದ್ಧತಿಗೆ ಒಳಗಾಗದೇ ಜೀವನದಲ್ಲಿ ಯಾವುದೇ ತೊಂದರೆ ಎದುರಾದರೂ ಕೂಡ ಅದನ್ನು ಎದುರಿಸಲು ಮಾನಸಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.

ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ, ಮಾದಕ ವ್ಯಸನ ಹೆಚ್ಚಾಗಿ ಸಮಾಜದಲ್ಲಿ ಹರಡಿಕೊಂಡಿದೆ. ಅದನ್ನು ನಿರ್ಮೂಲನೆ ಮಾಡಲು ನಾವೆಲ್ಲರೂ ಒಟ್ಟಾಗಿ ಕೈಜೋಡಿಸಬೇಕು. ಮಾದಕ ಔಷಧಗಳು ಮನುಷ್ಯನಿಗೆ ಉಲ್ಲಾಸವನ್ನ ಕೊಡುತ್ತವೆ. ಒಂದು ಸಾರಿ ಅದಕ್ಕೆ ದಾಸನಾದರೆ ಮತ್ತೆ ಬೇಕೆಂಬ ಹಂಬಲವನ್ನು ಹೆಚ್ಚಾಗಿಸುತ್ತವೆ. ಪರಿಣಾಮ ಮಾನವನ ನಾಶ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿವೈಎಸ್ಪಿ ಶಿವಮೂರ್ತಿ, ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ರವಿಕಾಂತ್ ಬಿ. ಲಂಬಾಣಿ, ಡಾ.ಎಂ.ಎಸ್.ರೇಖಾ, ಸಂಚಾರ ಪಿಎಸ್‌ಐಗಳಾದ ಸಾಹೇಬ್‌ಗೌಡ, ಕಮಲಾಕ್ಷಿ, ಸಹ ಪ್ರಾಧ್ಯಾಪಕರಾದ ಕುಸುಮಾದೇವಿ, ಎಂ.ಬಿ.ಪ್ರಮೀಳಾ ಇತರರಿದ್ದರು.