ಜಿಲ್ಲೆ

ಬಂಟಕಲ್ಲು ಕಾಲೇಜಿನಲ್ಲಿ ಉಪನ್ಯಾಸ

ಇಂದಿರಾ ಎನ್ ಕೆ

ಶಿರ್ವ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕ ಹಾಗೂ ಐಎಸ್‌ಟಿಇ ಅಧ್ಯಾಪಕ ಘಟಕದ ಸಹಯೋಗದೊಂದಿಗೆ ಸಂಶೋಧನಾ ಅನುದಾನ ಅವಕಾಶಗಳು ಮತ್ತು ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿ ಮಣಿಪಾಲ ತಾಂತ್ರಿಕ ವಿದ್ಯಾಲಯದ ಆರ್.ಡಿ. ಘಟಕದ ಸಹ ನಿರ್ದೇಶಕ ಡಾ.ಅಶೋಕ್ ರಾವ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಯ ಮಹತ್ವ ಮತ್ತು ಶಿಕ್ಷಕರು ಎದುರಿಸುವ ವಿವಿಧ ಸವಾಲುಗಳ ಬಗ್ಗೆ, ಬೋಧನೆಯ ಜವಾಬ್ದಾರಿಗಳು ಮತ್ತು ಸಂಶೋಧನಾ ಚಟುವಟಿಕೆಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯತೆಯನ್ನು ತಿಳಿಸಿದರು. ಪ್ರತಿಯೊಬ್ಬ ಉಪನ್ಯಾಸಕರು ಸಂಶೋಧನೆಯತ್ತ ಹೆಚ್ಚು ಗಮನ ಹರಿಸಬೇಕು ಹಾಗೂ ಪಿಎಚ್.ಡಿ ಪದವಿ ಪಡೆದುಕೊಳ್ಳುವುದು ಸಂಶೋಧನಾ ಜೀವನದ ಪ್ರಾರಂಭ ಮಾತ್ರ ಎಂದರು. ಸಂಶೋಧನೆಗೆ ಬೆಂಬಲ ನೀಡುವ ಹಲವಾರು ಸರ್ಕಾರಿ ಮತ್ತು ಖಾಸಗಿ ಅನುದಾನ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ.ರಾಧಾಕೃಷ್ಣ ಐತಾಳ್, ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಡೀನ್‌ಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.