ಜಿಲ್ಲೆ

ಭಜನೆಯಿಂದ ಜೀವನ ಶಿಕ್ಷಣ : ವಕೀಲ ಬಿ.ಕೆ.ಧನಂಜಯ ರಾವ್ ಅಭಿಮತ

ಸೌಮ್ಯ ಆರ್

ಬೆಳ್ತಂಗಡಿ: ಜೀವನ ಶಿಕ್ಷಣವನ್ನು ಕಲಿಸುವ ಭಜನೆಗಳು ಸಾರ್ಥಕ ಬದುಕಿಗೆ ದಾರಿದೀಪ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಭಜನಾ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ವಕೀಲ ಬಿ.ಕೆ.ಧನಂಜಯ ರಾವ್ ಹೇಳಿದರು.

ಧರ್ಮಸ್ಥಳದಲ್ಲಿ ಶನಿವಾರ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟದಲ್ಲಿ ‘ಭಜನಾ ಸಂಸ್ಕೃತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಪ್ರತಿಯೊಬ್ಬ ಭಜಕನೂ ಒಂದು ಆಲಯವಿದ್ದಂತೆ. ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜಕರೆಲ್ಲರೂ ಭಜನಾ ಸಂಸ್ಕೃತಿ ಮೂಲಕ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪಸರಿಸುವ ರಾಯಭಾರಿಗಳಾಗಬೇಕು. ಮಕ್ಕಳಿಗೂ ಭಜನೆ ಕಲಿಸುವ ಮೂಲಕ ಅವರನ್ನು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಬೆಳ್ತಂಗಡಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಸುಪ್ರಿಯಾ ಹಷೇರ್ಂದ್ರ ಕುಮಾರ್ ಉಪಸ್ಥಿತರಿದ್ದರು.

ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ.ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ.ಅಳಿಯೂರು ಹಾಗೂ ರವೀಂದ್ರ ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲಾ ಅಧ್ಯಾಪಕ ಶ್ರೀಜಾ ಯೋಗೀಶ್ ನಿರೂಪಿಸಿದರು.