ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಕಾಡೆಮಿಕ್ ಜ್ಞಾನದ ಸಂಪಾದನೆ ಮಾತ್ರವಲ್ಲದೆ ವನ ಮತ್ತು ಜಲ ಸಾಕ್ಷರತೆ ಹೊಂದುವುದು ಇಂದಿನ ಅಗತ್ಯವಾಗಿದೆ. ಅರಣ್ಯದ ಅನುಭವ ಜ್ಞಾನದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದು ಪರಿಸರ ಚಿಂತಕ ಶಿವಾನಂದ ಕಳವೆ ಹೇಳಿದರು.
ಗುರುವಾರ ಉಜಿರೆ ಶ್ರೀ ಧ.ಮಂ ಕಾಲೇಜಿನಲ್ಲಿ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗಂದ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರಾಯೋಜಕತ್ವದಲ್ಲಿ ನಡೆದ ಡಾ.ಬಿ.ಯಶೋವರ್ಮ ಸ್ಮರಣಾರ್ಥ ಉಪನ್ಯಾಸ ಮಾಲೆ ಅರಿವಿನ ದೀವಿಗೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಪರ್ಯಾಯ ದಾರಿಗಳು ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಸೋನಿಯಾ ಯಶೋವರ್ಮ ಮಾತನಾಡಿ, ಯಶೋವರ್ಮ ಬದುಕಿನಲ್ಲಿ ಪರಿಸರ ಪ್ರಜ್ಞೆಯನ್ನು ಅಳವಡಿಸಿಕೊಂಡಿದ್ದರು. ಆ ಪ್ರಜ್ಞೆಯ ಕಾರಣವಾಗಿ ಅವರು ಕಾಲೇಜು ಮತ್ತು ಮನೆಯಲ್ಲಿ ಪರಿಸರ ಸಂರಕ್ಷಣೆಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ನಾವು ಇತಿಹಾಸದ ಪಾಠಗಳಲ್ಲಿ ಮಹಾನ್‌ನಾಗರಿಕತೆಗಳು ಅಳಿದಿರುವುದನ್ನು ಓದುತ್ತೇವೆ. ಅರಣ್ಯ ನಾಶ ಆದ ಕಡೆಗಿನ ಸಾಮ್ರಾಜ್ಯಗಳು ಅಳಿದಿವೆ. ಇದನ್ನು ಕಂಡುಕೊಂಡರೆ ನಾವು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವರ ಅಜ್ಞಾನದ ಪರಿಸರ ವಿರೋಧಿ ಚಟುವಟಿಕೆಗಳು ವಾಯುಮಂಡಲವನ್ನು ಹಾಳುಗೆಡವಿ ಪರಿಸರದ ಅಸಮತೋಲನಕ್ಕೆ ಕಾರಣವಾಗಿವೆ. ಆದ್ದರಿಂದ ಭವಿಷ್ಯದ ಆರೋಗ್ಯಕರ ವಾತಾವರಣಕ್ಕಾಗಿ ಪರಿಸರ ಪ್ರಜ್ಞೆ ಅಗತ್ಯ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಭೋಜಮ್ಮ ಕೆ. ಎನ್‌ವಂದಿಸಿದರು.