ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತದಲ್ಲಿ ಬೇರೂರಿದ್ದ ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಗಾಂಧೀಜಿ ಸೋಲಿಸಿದ್ದು ಕತ್ತಿ ಅಥವಾ ಬಂದೂಕುಗಳಿಂದಲ್ಲ. ಸತ್ಯ ಮತ್ತು ಅಹಿಂಸಾ ಎಂಬ ಶಸ್ತ್ರಾಸ್ತ್ರದ ಮೂಲಕವೂ ಯುದ್ಧ ಗೆಲ್ಲಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಅವರ ಸತ್ಯ ಮತ್ತು ಅಹಿಂಸಾ ಮಾರ್ಗವು ಸಾರ್ವಕಾಲಿಕ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಜಯರಾಮ ಶೆಟ್ಟಿಗಾರ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಕಲ್ಯಾಣಪುರದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಗಾಂಧಿ ಜಯಂತಿ ನಿಮಿತ್ತ ಮಂಗಳವಾರ (ಸೆ.30) ಆಯೋಜಿಸಿದ್ದ ಶಾಂತಿಯ ಮಂತ್ರದೊಂದಿಗೆ ಜಗತ್ತಿಗೆ ಗಾಂಧೀಜಿ ನೇತೃತ್ವ ಎಂಬ ಉಪನ್ಯಾಸ ಕಾರ್ಯಕ್ರಮಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಜಗತ್ತಿಗೆ ಯುದ್ಧ ಅನಿವಾರ್ಯವಲ್ಲ. ಆದರೆ, ವಿವಿಧೆಡೆ ಯುದ್ಧದ ಸಂದಿಗ್ಧತೆಯಲ್ಲಿರುವ ಜಗತ್ತಿಗೆ ಗಾಂದೀಜಿ ಸಾರಿದ ಶಾಂತಿ ಮಂತ್ರ ಇಂದು ಅನಿವಾರ್ಯವಾಗಿದೆ. ಅವರ ಜೀವನಾದರ್ಶ, ತತ್ವ-ಸಿದ್ಧಾಂತಗಳು ಭಾರತವಷ್ಟೇ ಅಲ್ಲದೆ, ವಿಶ್ವಾದ್ಯಂತ ಇರುವ ಹಲವು ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಗಣೇಶ ನಾಯಕ, ಶುಭಲತಾ, ಐಕ್ಯುಎಸಿ ಅಧಿಕಾರಿ ಶಾಲೆಟ್ ಮಥಾಯಸ್ ಉಪಸ್ಥಿತರಿದ್ದರು.
ತ್ರಿಶಾ ಸ್ವಾಗತಿಸಿದರು. ರಕ್ಷಾ ವಂದಿಸಿದರು. ಅತೀಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.