ಚಿಕ್ಕಮಗಳೂರು: ಗ್ರಾಪಂಗಳಿಗೆ ಆಯ್ಕೆಗೊಂಡ ಸದಸ್ಯರು ತಮ್ಮ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಸಾಧನೆ ಮೂಲಕ ತಮ್ಮ ಹೆಜ್ಜೆಗುರುತು ಮೂಡಿಸಿ ಮತ್ತೊಬ್ಬರು ಅನುಕರಿಸುವಂತೆ ಮಾಡಬೇಕು ಶಾಸಕ ಸಿ.ಟಿ. ರವಿ ಸಲಹೆ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಯತ್ನಕ್ಕೆ ಮೀರಿದ ಸಂಗತಿ ಇಲ್ಲ:
ಜೀವನದಲ್ಲಿ ಮನುಷ್ಯನ ಪ್ರಯತ್ನಕ್ಕೆ ಮೀರಿದ ಸಂಗತಿ ಯಾವುದೂ ಇಲ್ಲ. ಕೆಲಸದ ಬಗ್ಗೆ ಆಸಕ್ತಿ, ಶ್ರದ್ಧೆ ಇದ್ದಲ್ಲಿ ಪ್ರತಿಫಲ ದೊರೆಯಲಿದೆ. ನೂತನವಾಗಿ ಆಯ್ಕೆಗೊಂಡಿರುವ ಸದಸ್ಯರು ಬದುಕಿನಲ್ಲಿ ತಮ್ಮ ಮೊದಲ ಅವಕಾಶವನ್ನು ಮೆಟ್ಟಿಲನ್ನಾಗಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡುವ ಮುಖ್ಯ ಉದ್ದೇಶ ಕೈಗೊಳ್ಳಬಹುದಾದ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು, ನಿಯಮಗಳು ಸೇರಿದಂತೆ ಅವಶ್ಯಕವಾಗಿ ತಿಳಿಯಬೇಕಾದ ವಿಷಯಗಳ ಮಂಡನೆಗಾಗಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು ಎಲ್ಲ್ಲ ಸದಸ್ಯರು ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.
ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ:
ಚುನಾಯಿತ ಪ್ರತಿನಿಧಿಗಳಿಗೆ ಕಾನೂನಿನ ಇತಿಮಿತಿ ಇದ್ದು ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತರಬೇತಿಗೆ ಸಂಬಂಧಿಸಿದ ಕಿಟ್‍ಗಳನ್ನು ವಿತರಿಸಲಾಯಿತು. ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್, ಉಪಾಧ್ಯಕ್ಷೆ ಶಾರದಾ ಶಶಿಧರ್, ಜಿಪಂ ಸಿಇಒ ಎಸ್.ಪೂವಿತ, ಇಒ ಎಚ್.ಕೆ. ತಾರಾನಾಥ್ ಮತ್ತಿತರರಿದ್ದರು.