ಜಿಲ್ಲೆ

ಅನವಶ್ಯ ಆರೋಪ ಬಿಟ್ಟು, ಸಲಹೆ ಕೊಡಿ

ಸೋಮಲಿಂಗ ತಳವಾರ

ಬೆಳಗಾವಿ: ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಹುಮತ ಪಡೆದಿದ್ದೇವೆ. ವಿರೋಧಿಗಳು ಇನ್ನಾದರೂ ಅನವಶ್ಯಕ ಆರೋಪ ಬಿಟ್ಟು, ಬ್ಯಾಂಕ್​ ಅಭಿವೃದ್ಧಿಗೆ ಸಲಹೆ ಕೊಡಲಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಕ್ಕೇರಿ, ರಾಮದುರ್ಗದಲ್ಲಿ ಹಿನ್ನಡೆಯಾಗಿದೆ. ಅಥಣಿ ಸ್ಪರ್ಧೆ ಇರಲಿಲ್ಲ. 7ರಲ್ಲಿ 4 ಸ್ಥಾನದಲ್ಲಿ ಗೆಲುವು ನಮ್ಮದಾಗಿದೆ. ಅವಿರೋಧ ಆಯ್ಕೆಯಾದವರು 9 ಜನ ನಮ್ಮವರೇ ಇದ್ದು, ಮುಂದಿನ ಐದು ವರ್ಷದಲ್ಲಿ ಬ್ಯಾಂಕ್​ ಮಾದರಿಯಾಗಿ ಬೆಳೆಸುತ್ತಾರೆ ಎಂದರು.

ಚುನಾವಣೆಯಲ್ಲಿ ಜಾತಿ ಟ್ರಂಪ್​ ಕಾರ್ಡ್​ ಯಶಸ್ವಿಯಾಗಿಲ್ಲ. ಆದರೂ ಲಕ್ಷ$್ಮಣ ಸವದಿ, ಗೆದ್ದಿರುವ ನಾವೆಲ್ಲ ಒಂದೇ ಕೋಮಿನವರಿದ್ದೇವೆ. ನಾವೇ ಸೇರಿ ಯಾಕೆ ಆಡಳಿತ ಮಾಡಬಾರದೆಂಬ ವಿಚಾರವನ್ನು ಕೆಲ ಸದಸ್ಯರನ್ನು ಹೇಳಿದ್ದಾರಂತೆ. ಈ ಬಗಗಿನ ಚರ್ಚೆ ಅಗತ್ಯವಿಲ್ಲ. ಜನ ಯಾರು ಹೇಗೆ ಎನ್ನುವುದನ್ನು ಅರಿತುಕೊಂಡಿದ್ದಾರೆ. ಆದರೆ ಮುಗಿದು ಹೋಗಿರುವ ಹಳೇ ಪ್ರಕರಣಗಳನ್ನು ವಿರೋಧಿಗಳು ಚರ್ಚೆಗೆ ತಂದಿದ್ದಾರೆ. ಈ ಬಗ್ಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ವಿಚಾರ ಮಾಡಿದ್ದೇವೆ. ರಾಯಬಾಗ ತಾಲೂಕಿನ ಮತದಾರ ಪ್ರತಿನಿಧಿಗಳನ್ನು ಕೂಡಿಟ್ಟಿರುವ ಆರೋಪಕ್ಕೆ ಪುರಾವೆಗಳಿಲ್ಲ ಎಂದರು.

ಅಪೇಕ್ಸ್​ ಬ್ಯಾಂಕಿಗೆ ಹಾಲುಮತದವರು: ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಡಿಸಿಸಿ ಬ್ಯಾಂಕಿಗೆ ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಅಪೇಕ್ಸ್​ ಬ್ಯಾಂಕಿಗೆ ಹಾಲುಮತದವರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ಕಾಗವಾಡದ ರಾಜು ಕಾಗೆ ನಮ್ಮೊಂದಿಗೆ ಬರುತ್ತಾರೆ. ಗಣೇಶ ಹುಕ್ಕೇರಿ ಬರುವುದಾಗಿ ಹೇಳಿದ್ದಾರೆ ಎಂದರು.

50 ಕೊಟಿ ಬೆಟ್ಟಿಂಗ್​: ಲಕ್ಷ$್ಮಣ ಸವದಿ ನಮ್ಮವರೇ ಅಧ್ಯಕ್ಷರಾಗುತ್ತಾರೆ ಎಂದಿದ್ದಾರೆ. ಇದಕ್ಕೆ 50 ಕೋಟಿ ರೂ. ಬೆಟ್ಟಿಂಗ್​ ಕಟ್ಟಲು ನಾನು ರೆಡಿ. ಸವದಿ ಒಪ್ಪುತ್ತಾರಾ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತೇವೆ. ಕೆಲ ಗೌಪ್ಯ ವಿಷಯಗಳನ್ನು ಬಹಿರಂಗವಾಗಿ ಮಾತನಾಡಬಾರದು ಎಂದರು.

ಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲದ ಬಗ್ಗೆಯೂ ಮಾತನಾಡಿದ್ದಾರೆ. ಈ ಬ್ಯಾಂಕಿನ 33 ಕೋಟಿ ರೂ. ಸಾಲ ಬಾಕಿ ಇದೆ. ಈ ಕಾರ್ಖಾನೆಯಿಂದಲೇ ಸಾಲ ವಸೂಲಾತಿ ಆರಂಭಿಸುತ್ತೇವೆ. ಯಾರ ಸಾಲ ಎಷ್ಟಿದೆ. ಅದನ್ನು ಹೇಗೆ ವಸೂಲಿ ಮಾಡುತ್ತೇವೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.

ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ಅಪ್ಪಾಸಾಹೇಬ ಕುಲಗುಡೆ, ಮಾಜಿ ಶಾಸಕ ಅರವಿಂದ ಪಾಟೀಲ, ರಾಹುಲ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ ಇತರರಿದ್ದರು.