ನರಗುಂದ: ರಾಜಕೀಯವಾಗಿ ಕಾಲೆಳೆಯುವುದನ್ನು ಹಾಗೂ ಮೊಂಡುತನವನ್ನು ಬಿಟ್ಟು ಹಾಲಿ ಶಾಸಕ ಸಿ.ಸಿ. ಪಾಟೀಲ ಹಾಗೂ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರು ಮತಕ್ಷೇತ್ರದ ಜನತೆಗೆ, ರೈತರಿಗೆ ಸರ್ಕಾರದಿಂದ ಅವಶ್ಯವಿರುವ ಯೋಜನೆಗಳನ್ನು ತರಲು ಪ್ರಯತ್ನಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಹಾಲಿ, ಮಾಜಿ ಶಾಸಕರು ಅಧಿಕಾರಿಗಳ ಮೇಲೆ ದರ್ಪ ತೋರುವುದನ್ನು ಬಿಡಬೇಕು. ಉತ್ತರ ಕರ್ನಾಟಕದ ಬಹು ದಿನಗಳ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಒತ್ತಡ ಹೇರುತ್ತೇನೆ ಎಂದರು.
ನನಗೆ ಅಧಿಕಾರವಿಲ್ಲದಿದ್ದರೂ ಕ್ಷೇತ್ರದ ಜನರಿಗೆ ಕೈಲಾದ ಸಹಾಯ, ಸಹಕಾರ ಮಾಡುತ್ತೇನೆ. ಚುನಾವಣೆಗೂ ಮುನ್ನ ನರಗುಂದ ಪಟ್ಟಣದ 5 ರಿಂದ 15 ವರ್ಷದೊಳಗಿನ 1200 ಬಡ ಮಕ್ಕಳಿಗೆ 10 ಲಕ್ಷ ರೂಪಾಯಿ ಮೊತ್ತದ ಉಚಿತ ಆರೋಗ್ಯ ವಿಮೆ ಮಾಡಿಸಲಾಗಿದೆ. ತಾಲೂಕಿನ ಎಲ್ಲ ಬಡ ಮಕ್ಕಳ ಸಮೀಕ್ಷೆ ಕೈಗೊಂಡು ಅವರಿಗೂ ಉಚಿತ ಆರೋಗ್ಯ ವಿಮೆ ಮಾಡಿಸಲು ನಿರ್ಧರಿಸಲಾಗಿದೆ. ಪಟ್ಟಣದಲ್ಲಿ ತುರ್ತು ನಿಗಾ ಘಟಕ (ಐಸಿಯು) ಸೌಲಭ್ಯ ಹೊಂದಿರುವ 5 ಬೆಡ್‌ಗಳ ಸ್ವಂತ ಆಸ್ಪತ್ರೆಯನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಿ ಮತಕ್ಷೇತ್ರದ ಬಡ ಜನರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದರು.