ಹುಣಸೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಾಗಿದ್ದುಕೊಂಡು ರಾಜಕೀಯ ಮಾಡುವುದು ಬೇಡ... ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಿ... ಜನಪ್ರತಿನಿಧಿಗಳೊಂದಿಗೆ ಸಮನ್ವಯತೆ ಸಾಧಿಸಿ ಕರ್ತವ್ಯ ನಿರ್ವಹಿಸಿದರೆ ಶೇ.70ರಷ್ಟು ಸಮಸ್ಯೆಗಳ ಪರಿಹಾರ ಸಾಧ್ಯ.. ಜನಪ್ರತಿನಿಧಿಗಳ ನಡುವೆ ಒಡೆದು ಆಳುವ ನೀತಿ ಮಾಡುತ್ತಿರುವುದು ಸರಿಯೇ..
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾ.ಪಂ.ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
ತಾಲೂಕಿನ ಹಲವು ಗ್ರಾಪಂಗಳಲ್ಲಿ ಪಿಡಿಒಗಳು ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದೆ ಅವರ ಅಧಿಕಾರ ವ್ಯಾಪ್ತಿಗೆ ಬರದ ವಿಷಯಗಳಲ್ಲಿ ಮೂಗು ತೂರಿಸಲು ಹೊರಟಿರುವುದು ನನ್ನ ಗಮನಕ್ಕೆ ಬಂದಿದೆ. ಗ್ರಾಮ ಲೆಕ್ಕಿಗ ಮತ್ತು ಪಿಡಿಒ ಜನಸಾಮಾನ್ಯರ ನಡುವೆ ಅತಿಹೆಚ್ಚು ಇದ್ದು ಕೆಲಸ ಮಾಡಬೇಕಾದ ಅಧಿಕಾರಿಗಳಾಗಿದ್ದಾರೆ. ನೀವು ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ತಾಲೂಕಿನ ಶೇ.70ರಷ್ಟು ಸಮಸ್ಯೆ ಪರಿಹಾರವಾಗಲು ಸಾಧ್ಯ. ಆದರೆ ನೀವು ಮಾಡುತ್ತಿರುವುದಾದರೂ ಏನು? ಸರ್ಕಾರಿ ಇಲಾಖೆಗಳ ಪೈಕಿ ಸಾರ್ವಜನಿಕರಿಂದ ಅತಿಹೆಚ್ಚು ದೂರುಗಳು ಪಿಡಿಒಗಳ ಮೇಲೆ ಬರುತ್ತಿದೆ. ಇದಕ್ಕೆ ಕಾರಣರ‌್ಯಾರು ಎಂದು ತಾಪಂ ಇಒ ಕೆ.ಹೊಂಗಯ್ಯ ಅವರನ್ನು ಪ್ರಶ್ನಿಸಿದರು.
ಒಡೆದು ಆಳುವ ನೀತಿ ಕೈಬಿಡಿ: ಸರ್ಕಾರದ ಮಾರ್ಗದರ್ಶಿಯಂತೆ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಿಲ್ಲವೇಕೆ? ಗ್ರಾಪಂ ಸದಸ್ಯರು, ವರಿಷ್ಠರ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಲ್ಲ ಸರಿಯಾ? ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಪಕ್ಷಪಾತ ಸಹಿಸುವುದಿಲ್ಲ. ಗ್ರಾಮಗಳಲ್ಲಿ ಸ್ವಚ್ಛತೆ, ರಸ್ತೆ, ಚರಂಡಿ, ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಶಾಲಾ ಅಭಿವೃದ್ಧಿ, ಘನತ್ಯಾಜ ನಿರ್ವಹಣೆ, ನರೇಗಾ ಯೋಜನೆ ಜಾರಿ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಜವಾಬ್ದಾರಿ ನಿಮ್ಮದಾಗಿದೆ. ಹೀಗಿದ್ದೂ ಖಾತೆ ಮಾಡಿಕೊಡುತ್ತಿಲ್ಲವೆಂದು ಜನರು ನನ್ನ ಬಳಿ ಬರುತ್ತಿದ್ದಾರೆಂದರೆ ಏನರ್ಥ? ಅದನ್ನು ನಾನು ಮಾಡಲೇ ಎಂದು ಬೇಸರಿಸಿದ ಅವರು, ನಾನು ಎಲ್ಲ ಪಂಚಾಯಿತಿಯಲ್ಲೂ ಹೀಗೆ ನಡೆಯುತ್ತಿದೆ ಎನ್ನುತ್ತಿಲ್ಲ. ಆದರೆ ನಾನು ಪ್ರಸ್ತಾಪಿಸುತ್ತಿರುವ ವಿಷಯಗಳು ಆಯಾ ಪಂಚಾಯಿತಿ ಅಧಿಕಾರಿಗೆ ತಿಳಿಯುತ್ತಿದೆ ಎಂದುಕೊಳ್ಳುತ್ತೇನೆ ಎಂದರು.
ಸಮನ್ವಯದಿಂದ ಕೆಲಸ ಮಾಡಿ: ನಿಮ್ಮ ಮತ್ತು ಜನಪ್ರತಿನಿಧಿಗಳ ನಡುವಿನ ಸಮನ್ವಯತೆಯ ಕೊರತೆಯೇ ಸಮಸ್ಯೆ ಉಲ್ಬಣಿಸಲು ಕಾರಣ. ವೈಯಕ್ತಿಕ ಪ್ರತಿಷ್ಠೆಯನ್ನು ಬಿಡಿ. ರಾಜಕಾರಣಿಗಳು ಕಚ್ಚಾಡಿಕೊಂಡರೆ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ನೀವು ಮೂಗು ತೂರಿಸುವುದನ್ನು ಬಿಡಿ. ಇನ್ನು ಮುಂದೆ ಇದು ಪುನರಾವರ್ತನೆ ಆಗಬಾರದು. ಮುಂದೆ ಮರುಕಳಿಸಿದರೆ, ಕೆಡಿಪಿ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡು ಶಿಸ್ತುಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ. ನನಗೆ ತಾಲೂಕಿನ ಜನರ ಸಮಸ್ಯೆಗಳಿಗೆ ಪರಿಹಾರ ಬೇಕೇ ಹೊರತು ನಿಮ್ಮ ಸ್ವಪ್ರತಿಷ್ಠೆಯಲ್ಲ. ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಪಡೆದು ಹೋಗಿರಿ ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಹಿರೀಕ್ಯಾತನಹಳ್ಳಿ, ಸಿಂಗರಮಾರನಹಳ್ಳಿ, ಹನಗೋಡು, ಕೊತ್ತೇಗಾಲ, ಮುಳ್ಳೂರು, ಕಿರಂಗೂರು ಮುಂತಾದ ಗ್ರಾ.ಪಂ.ಗಳ ಸದಸ್ಯರು ಮತ್ತು ಪಿಡಿಒಗಳನ್ನು ಕರೆಯಿಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಪರಿಹಾರ ಕ್ರಮಗಳನ್ನು ಶಾಸಕ ಹರೀಶ್‌ಗೌಡ ತಿಳಿಸಿದರು.
ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ಸಿದ್ದಗಂಗಮ್ಮ, ಇಒ ಕೆ.ಹೊಂಗಯ್ಯ, ತಾ.ಪಂ.ಯೋಜನಾಧಿಕಾರಿ ರಾಜೇಶ್, ತಾ.ಪಂ.ಸಿಬ್ಬಂದಿ, ಪಿಡಿಒಗಳು ಮತ್ತು ವಿವಿಧ ಗ್ರಾ.ಪಂ.ಸದಸ್ಯರು ಮತ್ತು ವರಿಷ್ಠರು ಹಾಜರಿದ್ದರು.
ಪ್ರತಿ ತಿಂಗಳು ಸಭೆ: ಮುಂದಿನ ತಿಂಗಳಿನಿಂದ ಪ್ರತಿ ತಿಂಗಳ ನಿರ್ದಿಷ್ಟ ದಿನದಂದು ಪಿಡಿಒಗಳ ಸಭೆ ನಡೆಸಲಿದ್ದೇನೆ. ಗ್ರಾಪಂ ವ್ಯಾಪ್ತಿಯಲ್ಲಿ ಈ ಹಿಂದೆ ಆಶ್ರಯ ಯೋಜನೆ ಜಾರಿಗಾಗಿ ಗುರುತಿಸಿರುವ ಜಾಗ ಅಥವಾ ಗುರುತಿಸಿರದಿದ್ದಲ್ಲಿ ಹಾಲಿ ಇರುವ ಸರ್ಕಾರಿ ಜಾಗಗಳು ಇದ್ದಲ್ಲಿ ಅವುಗಳ ಮಾಹಿತಿಯನ್ನು ಕಲೆಹಾಕಿ ದಾಖಲೆ ಸಮೇತ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕೆಂದು ಶಾಸಕ ಹರೀಶ್‌ಗೌಡ ಸೂಚಿಸಿದರು.
ಹಣ ಮನೆಯಿಂದ ತರುತ್ತೀರಾ?: ಸರ್ಕಾರ ಅನುದಾನ ನೀಡುತ್ತಿದೆ. ನಿಮಗೆ ಸರ್ಕಾರದ ನೀತಿ ನಿಯಮಗಳು ತಿಳಿದಿವೆ. ಹೀಗಿದ್ದೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿಮಗೇನು ಕಷ್ಟ? ಹಣ ನಿಮ್ಮ ಮನೆಯಿಂದ ತರುತ್ತಿದ್ದೀರ ಅಥವಾ ನಾನು ನನ್ನ ಮನೆಯಿಂದ ತರುತ್ತಿದ್ದೀನ? ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತವಿಲ್ಲದೆ ಕರ್ತವ್ಯ ನಿರ್ವಹಿಸುವುದನ್ನು ಅರಿಯಿರಿ ಎಂದು ಪಿಡಿಒಗಳಿಗೆ ಶಾಸಕ ಚಾಟಿ ಬೀಸಿದರು.