ಹಿರೇಕೆರೂರ: ಮಕ್ಕಳು ಕೀಳರಿಮೆ ಬಿಟ್ಟು ಓದಿನತ್ತ ಗಮನ ಹರಿಸಿದರೆ ಉನ್ನತ ಗುರಿ ಸಾಧಿಸಬಹುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿದ ನೂತನ ಕೊಠಡಿ, ದಾಸೋಹ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನಾರ್ಜನೆ, ಉತ್ತಮ ಪ್ರತಿಭೆ ಅಡಗಿರುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಓದಿದರೆ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪಾಲಕರು ಮಕ್ಕಳನ್ನು ಅನ್ಯ ಕೆಲಸಗಳಿಗೆ ಬಳಸದೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.
ಬಿಇಒ ಎನ್. ಶ್ರೀಧರ್ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರುತೆಪ್ಪ ಕೆ.ಎಚ್., ಸಮನ್ವಯಾಧಿಕಾರಿ ಅಂದಾನೆಪ್ಪ, ಸುಭಾಸ್ ಉಕ್ಕುಂದ, ಲಕ್ಷ್ಮಮ್ಮ ಒಡೆಯರಹಳ್ಳಿ, ಮಂಜಪ್ಪ ಕದರಮಂಡಲಗಿ, ನೀಲಮ್ಮ ಮುದ್ದೇರ, ಗಂಗಮ್ಮ ಬಿದರಿ, ಲಕ್ಷ್ಮಣ ಪೂಜಾರ, ಪೀರಪ್ಪ ಲಮಾಣಿ, ಬಸಲಿಂಗಪ್ಪ ಮಳವಳ್ಳಿ, ಪಾರ್ವತೆಮ್ಮ ಪೂಜಾರ, ಕಾಂತೇಶ ಮುದ್ದೇರ ಇತರರು ಇದ್ದರು.