ಜಿಲ್ಲೆ

ಕೀಳರಿಮೆ ಬಿಟ್ಟು ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳಿ: ಡಾ. ಮೋಹನ ಆಳ್ವಾ

ಅಕ್ಕಿಆಲೂರ: ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 51 ಕೋಟಿ ಯುವಕರಿದ್ದು, ಬೇರೆಯವರ ವ್ಯಕ್ತಿತ್ವ ನೋಡಿ ಕೀಳರಿಮೆಯಿಂದ ಬಹುತೇಕ ವಿದ್ಯಾರ್ಥಿಗಳಿಗೆ ಮುಂದೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವಾ ಕಳವಳ ವ್ಯಕ್ತಪಡಿಸಿದರು.

ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ನರಸಿಂಗ್ ದೇಸಾಯಿ ಕಾಲೇಜಿನಲ್ಲಿ ಭಾನುವಾರ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರೊಂದಿಗೆ ಭವಿಷ್ಯದ ಅವಕಾಶಗಳು ಮಾರ್ಗದರ್ಶಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಳ್ವಾಸ್​ನಲ್ಲಿ ಕಲಿಯುವ ಸುಮಾರು 20 ಸಾವಿರ ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಉತ್ತರ ಕರ್ನಾಟಕ ಭಾಗದವರಿದ್ದಾರೆ. ಅವರಲ್ಲಿ ಆತ್ಮವಿಶ್ವಾಸವಿದೆ. ಏನಾದರೂ ಸಾಧಿಸಬೇಕು ಎಂಬ ಹಂಬಲವಿದೆ. ಅವರವರ ಶಕ್ತಿ, ಕೌಶಲಕ್ಕೆ ತಕ್ಕಂತ ವೇದಿಕೆ ಕಲ್ಪಿಸಿ, ಸಮಾಜದಲ್ಲಿ ಗುರುತಿಸಿಕೊಳ್ಳುವ ಶಿಕ್ಷಣ ನೀಡಲಾಗುತ್ತದೆ ಎಂದರು.

ಶಾಲೆಗಳಲ್ಲಿ 6 ಗಂಟೆಗಳ ಕಾಲ ಮಾತ್ರ ಇರುವ ನೂರಾರು ವಿದ್ಯಾರ್ಥಿಗಳನ್ನು ಗಮನಿಸಿ, ಅವರಿಗೆ ಅಗತ್ಯವಿರುವ ಶಿಕ್ಷಣ ನೀಡುವುದು ಶಿಕ್ಷಕರಿಗೆ ದೊಡ್ಡ ಸವಾಲಾಗುತ್ತಿದೆ. ಪಾಲಕರು ಮೊದಲು ಮೌಲ್ಯಗಳನ್ನು ವೃದ್ಧಿಸುವ ಕೆಲಸ ಮಾಡಬೇಕು. ಭಾರತದಲ್ಲಿ ನ್ಯಾಯಾಂಗ, ಲೆಕ್ಕಪತ್ರ ಪರಿಶೋದಕ, ಇಂಜಿನಿಯರ್, ಪತ್ರಿಕೋದ್ಯಮ, ಬ್ಯಾಂಕಿಂಗ್ ಸೇರಿ ವೃತ್ತಿಪರ ಕೋರ್ಸ್​ಗಳು ಇದ್ದರೂ ಪಕ್ಕದ ಮನೆಯ ವಿದ್ಯಾರ್ಥಿಗಳನ್ನು ಗಮನಿಸಿ, ಅದೇ ಶಿಕ್ಷಣ ಕೊಡಿಸಲುವ ಧಾವಂತದಲ್ಲಿ ಪಾಲಕರು, ಮಕ್ಕಳ ಭವಿಷ್ಯದ ಜತೆಗೆ ಆಟವಾಡುತ್ತಿದ್ದಾರೆ. ಶಿಕ್ಷಣ ಪದವಿಗೆ ಮಾತ್ರ, ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಅವಕಾಶಗಳನ್ನು ಸೃಷ್ಠಿಸಿಕೊಳ್ಳುವ ಕೌಶಲ ಇದ್ದರೆ ಮಾತ್ರ ಇಂದಿನ ಆಧುನಿಕ ಯುಗದಲ್ಲಿ ಭಿನ್ನವಾಗಿ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.

ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ ಮನೋಜ ದೇಸಾಯಿ ಮಾತನಾಡಿ, ಇತಿಹಾಸದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ರೂಪಿಸಿರುವ ಮೋಹನ ಆಳ್ವಾ, ನಮ್ಮ ತಾಲೂಕಿನ ಮಕ್ಕಳಿಗೆ ಮೌಲ್ಯಯುತ ಸಂದೇಶ ನೀಡಿರುವುದು ಉಪಯೋಗವಾಗಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ಸಾಲಿಮಠ, ಶಿಕ್ಷಣ ಸಂಘದ ನಿರ್ದೇಶಕ ವಿ. ಎಚ್. ಪೂಜಾರ, ದುಂಡಿಬಸವೇಶ್ವರ ಜನಪದ ಕಲಾಸಂಘದ ಅಧ್ಯಕ್ಷ ಬಸವರಾಜ ಕೋರಿ, ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ ಉಪಸ್ಥಿತರಿದ್ದರು.

ಎಷ್ಟೇ ಸಮಸ್ಯೆ ಎದುರಾದರೂ, ಹಣವಿಲ್ಲದೆ, ಕಲಿಯಬೇಕೆಂಬ ಆಸಕ್ತಿ ಇರುವ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಗ್ರಾಮೀಣ ಪ್ರದೇಶದ ಅಸಹಾಯಕ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬಂದು, ಗುರಿ ಸಾಧಿಸಬೇಕು ಎಂಬ ಧ್ಯೇಯ ನಮ್ಮದು. | ಡಾ. ಮೋಹನ ಆಳ್ವಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೂಡುಬಿದರೆ