ಜಿಲ್ಲೆ

ಭವನದ ಗುತ್ತಿಗೆ ವಿಸ್ತರಣೆ ಅಕ್ರಮ, ಮುಡಾ ಅಧಿಕಾರಿಗಳ ಜಾಣಕುರುಡು

ಆರ್.ಕೃಷ್ಣ ಮೈಸೂರು
ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದರೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಭವನವನ್ನು ಮತ್ತೆ ಅದೇ ಗುತ್ತಿಗೆದಾರನಿಗೆ ಅವಧಿ ವಿಸ್ತರಿಸುವ ಮೂಲಕ ಮುಡಾ ಅಧಿಕಾರಿಗಳು ಜಾಣಕುರುಡು ಮೆರೆದಿದ್ದಾರೆ.
ಹೆಬ್ಬಾಳು ಬಡಾವಣೆ ಮುಖ್ಯರಸ್ತೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಅನ್ನು ಸುಮಾರು 55 ಲಕ್ಷ ರೂ. ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರಿನಿಗೆ ಎರಡು ವರ್ಷ ವಿಸ್ತರಿಸುವ ಮೂಲಕ ಆಶ್ವರ್ಯ ಮೂಡಿಸಿದ್ದಾರೆ. ಬಾಕಿ ಉಳಿಸಿಕೊಂಡಿರುವುದರಿಂದ ಬೀಗ ಹಾಕಿ ವಶಕ್ಕೆ ಪಡೆಯಲಾಗಿದೆ ಎಂದು ನೋಟಿಸ್ ಜಾರಿ ಮಾಡಿದ್ದ ಅಧಿಕಾರಿಗಳು, ಪ್ರಭಾವಕ್ಕೆ ಒಳಗಾಗಿ ಬಾಕಿ ಉಳಿಸಿಕೊಂಡವರಿಗೆ ಮತ್ತೆ ಗುತ್ತಿಗೆ ಅವಧಿ ವಿಸ್ತರಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹೆಬ್ಬಾಳು ಬಡಾವಣೆಯ ಮುಖ್ಯರಸ್ತೆಯಲ್ಲಿ 2017ರಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿದೆ. 2019-20ನೇ ಸಾಲಿನಿಂದ ವಾರ್ಷಿಕ 35 ಲಕ್ಷ ರೂ.ನಂತೆ ಬೆಂಗಳೂರಿನ ಸರ್ಕಾರ್ ಕನ್ಸ್ಟ್ರಕ್ಷನ್ ಮಾಲೀಕ ಎಸ್. ಸಿದ್ದರಾಜಪ್ಪ ಅವರಿಗೆ 5 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು.
ಆದರೆ 2020-21 ಹಾಗೂ 2021-22 ನೇ ಸಾಲಿನಲ್ಲಿ ಕೊರೊನಾ ಇದ್ದ ಕಾರಣ ಗುತ್ತಿಗೆ ಹಣವನ್ನು ಮನ್ನಾ ಮಾಡಲಾಗಿತ್ತು. ಆದರೂ ಗುತ್ತಿಗೆದಾರರು ಹಿಂದಿನ ಅವಧಿಯಲ್ಲಿ ಗುತ್ತಿಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಕರೊನಾದ ಎರಡು ವರ್ಷಗಳ ಗುತ್ತಿಗೆ ಹಣ ಪಾವತಿ ಹೊರತುಪಡಿಸಿ ಉಳಿದ ಅವಧಿಗೆ ಬಡ್ಡಿ ಸೇರಿದಂತೆ 55 ಲಕ್ಷ ರೂ ಬಾಕಿ ಪಾವತಿಸಬೇಕಿದೆ.
ಈ ಕಲ್ಯಾಣ ಮಂಟಪದಲ್ಲಿ ಮದುವೆ ಇನ್ನಿತರ ಸಮಾರಂಭ ನಡೆಸಲು 1.5 ಲಕ್ಷ ರೂ. ವರೆಗೂ ಗುತ್ತಿಗೆದಾರರು ಬಾಡಿಗೆ ನಿಗದಿ ಪಡಿಸಿದ್ದಾರೆ. ಮದುವೆ ಸಮಾರಂಭ ಇಲ್ಲದಿದ್ದಾಗ ಬಟ್ಟೆ ಹಾಗೂ ಪೀಠೋಪಕರಣಗಳ ವಸ್ತಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಅದಕ್ಕೂ ಬಾಡಿಗೆ ಪಡೆಯಲಾಗುತ್ತಿದೆ. ಹೀಗಿದ್ದರೂ ಗುತ್ತಿಗೆದಾರ ಸಿದ್ದರಾಜಪ್ಪ 55 ಲಕ್ಷ ರೂ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ.
ಬಾಕಿ ಹಣ ಪಾವತಿಸುವಂತೆ ವಲಯ 4 ರ ಎಇಇ ಸಂಪತ್‌ಕುಮಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಜತೆಗೆ, ಆಯುಕ್ತರ ನಿರ್ದೇಶನದ ಮೇರೆಗೆ ಮುಖ್ಯದ್ವಾರಕ್ಕೆ ಬೀಗ ಹಾಕಿ ಎಚ್ಚರಿಕೆಯನ್ನೂ ನೀಡಲಾಗಿದೆ. ಇಷ್ಟಾಗಿಯೂ ಬಾಕಿ ನೀಡದ ಗುತ್ತಿಗೆದಾರ ಸಿದ್ದರಾಜಪ್ಪ ಅವರು, ಪ್ರಭಾವಿ ಶಾಸಕರೊಬ್ಬರ ಸಂಬಂಧಿ ಎನ್ನುವ ಕಾರಣಕ್ಕೆ ಅಧಿಕಾರಿಗಳು ಮೌನ ವಹಿಸಿದ್ದಾರೆ.ಇದೆಲ್ಲದರ ಮಧ್ಯೆ ಪ್ರಭಾವಕ್ಕೆ ಮಣಿದು ಸಿದ್ದರಾಜಪ್ಪ ಅವರಿಗೆ ಮತ್ತೆರಡು ವರ್ಷಕ್ಕೆ ಕಲ್ಯಾಣ ಮಂಟಪದದ ಗುತ್ತಿಗೆ ನವೀಕರಿಸಿರುವ ಕುರಿತು ಆರ್‌ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಬಾಕಿ ವಸೂಲಿಗೆ ಕ್ರಮ
ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದ್ದು, ಗುತ್ತಿಗೆ ಅವಧಿಯನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿದ್ದು, ಯಾವುದೇ ಪ್ರಭಾವ ಇಲ್ಲ.
ಜಿ.ಟಿ.ದಿನೇಶ್‌ಕುಮಾರ್
ಆಯುಕ್ತ, ಮುಡಾ