ಯಲಬುರ್ಗಾ: ತಾಲೂಕಿನ ಬೇವೂರು ಗ್ರಾಮದ ಮುರಾರ್ಜಿ ವಸತಿ ಶಾಲೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಸತಿ ಶಾಲೆಯಲ್ಲಿನ ಸಮಸ್ಯೆಗಳು ಕುರಿತು ಆ.13ರಂದು ‘ಸೌಲಭ್ಯ ವಂಚಿತ ಮುರಾರ್ಜಿ ಶಾಲೆ’ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳ ತಂಡ ವಸತಿ ಶಾಲೆಗೆ ಭೇಟಿ ನೀಡಿ, ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್ ಅವರಿಂದ ವಸತಿ ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಗಳ ಕುರಿತು ಅಧಿಕಾರಿಗಳ ತಂಡ ಮಾಹಿತಿ ಪಡೆಯಿತು.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್ ಜನಾರ್ಧನ ಮಾತನಾಡಿ, ವಸತಿ ಶಾಲೆಗೆ ಸುಣ್ಣಬಣ್ಣ, ಕಿಟಕಿ ಗ್ಲಾಸ್ ದುರಸ್ತಿ, ಫ್ಯಾನ್ ಅಳವಡಿಕೆ, ಬೆಡ್, ಸಿಸಿ ರಸ್ತೆ, ಕಾಂಪೌಂಡ್ ಸೇರಿ ಇನ್ನಿತರ ಅವಶ್ಯವಿರುವ ಮೂಲಸೌಲಭ್ಯಗಳ ಬಗ್ಗೆ ವಸತಿ ಶಾಲೆಯಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ. ದುರಸ್ತಿ ಕ್ರಮಗಳ ಕುರಿತು ಕ್ರಿಯಾಯೋಜನೆ ರೂಪಿಸಲಾಗಿದ್ದು, ಅನುಮೋದನೆಗೆ ಕಳಿಸಲಾಗಿದೆ. ಹಂತ-ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ವೇಳೆ ಬಾಲಕ, ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಎಇಇ ಮಂಜುನಾಥ, ಎಇ ಗಿರೀಶ, ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್, ನಿಲಯ ಪಾಲಕ ಮಂಜುನಾಥ ತಳವಾರ್ ಇದ್ದರು.