ಮೈಸೂರು: ಸ್ವಯಂ ರಕ್ಷಣೆಗೆ ಕರಾಟೆ ಕಲಿಕೆ ಮುಖ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ತಿಳಿಸಿದರು.
ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುಪಿಎಸ್ಸಿ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್ ಸೇವೆಗೆ ಆಯ್ಕೆಯಾದರೆ ಮಸ್ಸೂರಿಯಲ್ಲಿ ನಡೆಯುವ ತರಬೇತಿಯಲ್ಲಿ ಕರಾಟೆ ಕಲಿಕೆ ಕಡ್ಡಾಯ. ನಾನೂ ತರಬೇತಿಯಲ್ಲಿದ್ದಾಗ ಕಲಿತಿದ್ದೇನೆ. 2021-21ರಲ್ಲಿ ಒಲಿಂಪಿಕ್ಸ್‌ನಲ್ಲಿ ಕರಾಟೆ ಪಂದ್ಯಾವಳಿಯನ್ನೂ ಸೇರಿಸಿದ್ದು ಸ್ವಾಗತಾರ್ಹವಾಗಿದೆ ಎಂದ ಅವರು, ಆಟದಲ್ಲಿ ಸೋಲು-ಗೆಲವು ಇರುತ್ತದೆ. ಆದರೆ ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿಯಿಂದ ಸಕ್ರಿಯವಾಗಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಆರ್‌ಎಸ್ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಕೆ.ರಘುರಾಮನ್ ಅವರು ಕರಾಟೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರು ಕುಮಿತೆ, ಪಾಲಿಕೆ ಮಾಜಿ ಸದಸ್ಯೆ ಸವಿತಾ ಸುರೇಶ್ ಅವರು ಬಾಲಕಿಯರ ಕುಮಿತೆ ಪಂದ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕರಾಟೆ ಸಂಯೋಜಕ ಸಂಜೀವ್ ಶ್ರೇಷ್ಠ ಅವರನ್ನು ಸನ್ಮಾನಿಸಲಾಯಿತು.
ಎರಡು ದಿನಗಳ ಈ ಕರಾಟೆ ಪಂದ್ಯಾವಳಿಯಲ್ಲಿ 1450 ಕರಾಟೆ ಪಟುಗಳು ಭಾಗಿಯಾಗಿದ್ದರು.
ತೀರ್ಪುಗಾರ ಚಿದಾನಂದ, ಕರಾಟೆ ತರಬೇತುದಾರ ಎಸ್.ಸುನಿಲ್ ಕುಮಾರ್ ಇದ್ದರು.: