ಬಾಗೇಪಲ್ಲಿ : ಪ್ರಸ್ತುತ ಬಹುತೇಕ ಮಕ್ಕಳು ಮೊಬೈಲ್ ಬಳಕೆಯತ್ತ ಆಸಕ್ತಿ ತೋರುತ್ತಿರುವ ಕಾರಣ ಕಲಿಕಾ ಆಸಕ್ತಿ ಕಡಿಮೆ ಆಗಿ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ಕಾರಕೂರು ಕ್ರಾಸ್‌ನಲ್ಲಿರುವ ಬ್ಲೂಮ್ಸ್ ಇಂಟರ್‌ನ್ಯಾಷನಲ್ ಶಾಲಾವರಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಉತ್ತೇಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನ್ನ ವೈದ್ಯಕೀಯ ಸೇವಾವಧಿಯಲ್ಲಿ ಬಹಳಷ್ಟು ಮಕ್ಕಳ ಮನಸ್ಸುಗಳ ಬಗ್ಗೆ ಆಧ್ಯಯನ ನಡೆಸಿದಾಗ ಶೇ.60ಕ್ಕೂ ಹೆಚ್ಚು ಮಕ್ಕಳು ಚಿಕ್ಕವಯಸ್ಸಿನಲ್ಲೇ ಒತ್ತಡಕ್ಕೆ ಗುರಿಯಾಗಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ಮಕ್ಕಳಲ್ಲಿ ಓದಬೇಕೆಂಬ ಒತ್ತಡ ಕಾಡುತ್ತಿದ್ದರೆ, ಮತ್ತೆ ಕೆಲ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚು ಇರುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಅದ್ದರಿಂದ ಪ್ರತಿ ವಿದ್ಯಾರ್ಥಿಯೂ ಆರೋಗ್ಯಕರವಾಗಿ ಇರಬೇಕಾದರೆ ನಿತ್ಯ ಜೀವನದಲ್ಲಿ ಒತ್ತಡಕ್ಕೆ ಗುರಿಯಾಗುವ ವಿಷಯಗಳಿಂದ ದೂರ ಉಳಿದು ಮೆದುಳಿನ ಒತ್ತಡ ಕಡಿಮೆ ಮಾಡಿಕೊಂಡು ಬುದ್ದಿವಂತಿಕೆಯಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಮಾಧಾನ ಚಿತ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ಜಂಕ್‌ುಡ್‌ನಿಂದ ದೂರವಿರಿ
ಆರೋಗ್ಯಕ್ಕೆ ಹಾನಿಕರವಾಗಿರುವ ಜಂಕ್‌ಪುಡ್ ಸೇವೆನೆಯಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಂಡು ಸಾಧನೆ ಮಾಡಬೇಕೆಂಬ ಗುರಿಯೊಂದಿಗೆ ಕಲಿಕೆಯತ್ತ ಸಾಗಿದಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿದ್ದು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಅಯೋಜಿಸಿರುವ ಇಂತಹ ಉತ್ತೇಜನ ಕಾರ್ಯಕ್ರಮಗಳು ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆ ತರಲಿವೆ ಎಂದು ಡಾ.ಸಿ.ಆರ್. ಚಂದ್ರಶೇಖರ್ ತಿಳಿಸಿದರು.
ವಿಜ್ಞಾನ ವಿಷಯದ ಬಗ್ಗೆ ಸರಳ ಮತ್ತು ಸಾಮಾನ್ಯ ಪ್ರಶ್ನೆಗಳ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬ್ಲೂಮ್ಸ್ ಆಕಾಡೆಮಿ ಅಧ್ಯಕ್ಷ ಡಾ.ವಿ.ಗೋವಿಂದರಾಜು, ಕಾರ್ಯದರ್ಶಿ ಅಶ್ವಿನಿಜೀ, ಪ್ರಾಂಶುಪಾಲೆ ಉಮಾಶಶಿ, ಉಪ ಪ್ರಾಂಶುಪಾಲ ಎಂ.ಗೋವಿಂದರಾಜು, ಶೈಕ್ಷಣಿಕ ಸಂಯೋಜಕರಾದ ಸಾಂಬಶಿವರಾಜ್, ಸುನೀಲ್ ಕುಮಾರ್, ಬ್ಲೂಮ್ಸ್ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲೆ ಕೆ.ಆರ್.ಸುಶೀಲಾ, ಪ್ರಥಮ ದರ್ಜೆ ಕಾಲೇಜು ಶೈಕ್ಷಣಿಕ ಸಂಯೋಜಕ ಮಂಜುನಾಥ್ ಮತ್ತಿತರರು ಇದ್ದರು.