ಹೂವಿನಹಡಗಲಿ: ಮಕ್ಕಳ ಪ್ರತಿಭೆ ಅರಳಲು ಶಾಲೆಗಳಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ಬಿಇಒ ಮಹೇಶ ಪೂಜಾರ ಹೇಳಿದರು.
ಪಟ್ಟಣದ ಜಿಪಿಜಿ ಸರ್ಕಾರಿ ಪ್ರೌಢಶಾಲೆಯಲ್ಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದ ಕೌಶಲಗಳು ಅಡಗಿರುತ್ತವೆ. ಶಾಲೆಗಳಲ್ಲಿ ಪಠ್ಯದ ವಿಷಯಗಳನ್ನು ಹಾಡುಗಾರಿಕೆ, ಅಭಿನಯ ಹಾಗೂ ವಿಭಿನ್ನ ಕಲೆಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ಕಡೆಗೆ ಹೆಚ್ಚಿನ ಆಸಕ್ತಿ ಮೂಡಿಸಿ ಬೋಧನೆ ಮಾಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ಮಕ್ಕಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮಹತ್ವವನ್ನು ತಿಳಿಸಬೇಕು. ಬಾಲ್ಯದಲ್ಲಿಯೇ ನಮ್ಮ ಪರಂಪರೆ ಮತ್ತು ಆಚರಣೆಗಳ ಜ್ಞಾನವನ್ನು ತಿಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ತಾಲೂಕು ದೈಹಿಕ ಅಧೀಕ್ಷಕ ರಫಿ ಅಹಮದ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಬಸಪ್ಪ ಕೆ, ತಾಲೂಕು ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಕಾಂತೇಶ, ಪ್ರಾಥಮಿಕ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಜಿ.ಜಗದೀಶ , ಕೆ.ಮಾದೇಶ್ವರ ಇತರರಿದ್ದರು.