ರೇವತಗಾಂವ ಸಮೀಪದ ಶಿರಾಡೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ವಿವಿಧ ವಾದ್ಯ ವೈಭವಗಳ ನೃತ್ಯ ಪ್ರದರ್ಶಿಸಿದರು. 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಕಲಿಕಾ ಹಬ್ಬ ಸಹಕಾರಿ

Vijayapura - Desk - Gurappa Lokuri

ರೇವತಗಾಂವ: ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮೂಡುವಂತೆ ಮಾಡುವುದು, ಸಂತಸದಾಯಕ ಕಲಿಕೆ ಪ್ರಕ್ರಿಯೆ, ಆತ್ಮ ವಿಶ್ವಾಸ ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಬಿಇಒ ಸುಜಾತಾ ಹುನ್ನೂರ ಹೇಳಿದರು.

ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಡಚಣ ವಲಯ ಸಮೂಹ ಸಂಪನ್ಮೂಲ ಕೇಂದ್ರ ಚಡಚಣ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ಎಲ್ಲ ಚಟುವಟಿಕೆ ಕಲಿಯಬೇಕು. ಆಟ ಆಡುವ ಮೂಲಕ ಪಾಠ ಕಲಿಯುವ ಕೆಲಸವಾಗಬೇಕು. ಸಮಯ ವ್ಯರ್ಥ ಮಾಡದೆ ಎಲ್ಲ ಮಕ್ಕಳು ಎರಡು ದಿನಗಳ ಕಾಲ ಕಲಿಕಾ ಹಬ್ಬದ ಚಟುವಟಿಕೆಗಳಾದ ಆಡು-ಹಾಡು, ಕಾಗದ-ಕತ್ತರಿ, ಊರು ತಿಳಿಯೋಣ, ಮಾಡು-ಹಾಡು ಎಂಬ ಗುಂಪುಗಳಲ್ಲಿ ಪೂರ್ಣವಾಗಿ ಭಾಗವಹಿಸಬೇಕೆಂದು ತಿಳಿಸಿದರು.

ನೌಕರರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ತರಗತಿ ಕೊಠಡಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ಮಕ್ಕಳಿಗೆ ಹೆಚ್ಚು ಸಂತಸ ನೀಡಲಾರದು. ತಾವು ಕಲಿತ ಪಾಠವನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ. ಮಕ್ಕಳಿಗೆ ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆ ಬಲವರ್ಧನೆಗೆ ಕಲಿಕಾ ಹಬ್ಬ ನಡೆಸುತ್ತಿದೆ ಎಂದರು.

ಇದಕ್ಕೂ ಮುನ್ನ ಕಲಿಕಾ ಹಬ್ಬದ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಿಕಾ ಹಬ್ಬದ ಮಹತ್ವವನ್ನು ಸಾರುವ ರೂಪಕಗಳೊಂದಿಗೆ ಅರ್ಥಪೂರ್ಣ ಪ್ರಭಾತಪೇರಿ ನಡೆಯಿತು. ಡೊಳ್ಳು ಕುಣಿತ, ಕೋಲಾಟ, ಲೇಜಿಮ್ ನೃತ್ಯ ವೈಭದೊಂದಿಗೆ ಮೆರವಣಿಗೆ ಸಾಗಿತ್ತು.

ಬಿಆರ್‌ಸಿ ಬಿ.ಕೆ. ವಾಘಮೋರೆ, ಎಂ.ಜಿ. ತೇಲಿ, ಪಿ.ಎನ್. ತಳವಾರ, ಶಾಲಾ ಪ್ರಭಾರಿ ಮುಖ್ಯಶಿಕ್ಷಕ ವಿಜಯಕುಮಾರ ಸಾತಪುತೆ ಸೇರಿ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತಿತರರಿದ್ದರು.