ಹರಪನಹಳ್ಳಿ: ಸಮಾಜದ ಹಿತ ಬಯಸುವುದು ಸರ್ವಧರ್ಮಗಳ ಮೂಲ ಉದ್ದೇಶವಾಗಿದೆ ಎಂದು ಪಟ್ಟಣದ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ತೆಕ್ಕದಗರಡಿಕೆರೆ ಬಳಿಯ ಮಸ್ಜಿದ್-ಎ-ಅಹ್ಲೇ ಹದೀಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು. ನಾವು ಇಂತಹದ್ದೇ ಧರ್ಮದಲ್ಲಿ ಹುಟ್ಟಬೇಕು ಎನ್ನುವುದು ಪೂರ್ವ ನಿಯೋಜನೆಯಾಗಿರುವುದಿಲ್ಲ. ಅದು ಭಗವಂತನ ನಿರ್ಧಾರ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೋಳ್ಳಬೇಕಿದೆ. ಹಿಂದು-ಮುಸ್ಲಿಂ ಧರ್ಮದಲ್ಲಿ ಆಚರಣೆಗಳು ಬೇರೆ-ಬೇರೆಯಾಗಿರಬಹುದು. ಆದರೆ ನಾವು-ನೀವುಗಳು ಮಾಡುವ ಪೂಜೆ, ಪ್ರಾರ್ಥನೆ ಭಗವಂತನಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಾನವ ಕಷ್ಟದಿಂದ ಸುಖದ ಕಡೆಗೆ ಬರಲು ಹಲವು ಸತ್ಕಾರ್ಯಗಳನ್ನು ಮಾಡುತ್ತಾನೆ. ಆದರಂತೆ ಇಫ್ತಾರ್ ಕೂಟ ಅಯೋಜಿಸಿರುವುದು ಶ್ಲಾಘನೀಯ. ಕೇವಲ ಹಬ್ಬ ಆಚರಣೆಗಳಲ್ಲಿ ಮಾತ್ರ ಮಾನವರಾದ ನಾವೆಲ್ಲ ಒಂದೇ ಎನ್ನುತ್ತೇವೆ ಹೊರತು ಸಾಮೂಹಿಕವಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದು-ಮುಸ್ಲಿಂ ಧರ್ಮದ ಮಧ್ಯೆ ಭಾತೃತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರೋಪಕಾರ ಗುಣಗಳು ಪ್ರಾಪ್ತಿಯಾಗಲು ಪ್ರಾಮಾಣಿಕವಾಗಿ ಜೀವಿಸಬೇಕು ಎಂದರು.
ಹಾಲಸ್ವಾಮಿ ಮಠದ ಸಣ್ಣಹಾಲ ಸ್ವಾಮೀಜಿ ಮಾತನಾಡಿ, ಹಿಂದುಗಳಿಗೆ ಶ್ರಾವಣ ಮಾಸ ಪವಿತ್ರವಾದರೆ, ಮುಸ್ಲಿಂ ಸಮುದಾಯಕ್ಕೆ ರಂಜಾನ್ ಪವಿತ್ರ ಮಾಸವಾಗಿದೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮೀಯರನ್ನು ಕರೆದು ಇಫ್ತಾರ್ ಕೂಟ ಅಯೋಜಿಸಿರುವುದು ಶ್ಲಾಘನೀಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ, ಅಕ್ರಮ್ ಭಾಷಾ, ಬಡಜಿ ಶಬೀರ್ ಅಹ್ಮದ್, ಡೆಂಕಿ ಇಮ್ರಾನ್, ಇಸ್ಮಾಯಿಲ್ ಎಲಿಗಾರ, ಶಿರಹಟ್ಟಿ ದಂಡೇಪ್ಪ, ಮೈಹಬೂಬ್ ಸಾಹೇಬ್ ಬಿ.ಅಲ್ಲಾಭಕ್ಷೀ ಸಾಹೇಬ್, ಎ.ಮಹಮದ್ ಆಲಿ, ಡಿ.ಜಬೀವುಲ್ಲಾ, ಡಿ.ಮುಜೀಬ್, ಎ.ಅನ್ಸರ್, ಬಿ.ಅಬ್ದುಲ್ ಅಲೀಮ್, ಬಿ.ಇಮಾಮ್ ಸಾಹೇಬ್ ಇತರರಿದ್ದರು.