ಯಲಬುರ್ಗಾ ತಾಪಂನಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಾತನಾಡಿದರು. 
ಜಿಲ್ಲೆ

ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ

Kopala - Desk - Eraveni

ಯಲಬುರ್ಗಾ: ಯೋಜನೆಗಳು ಜನರಿಗೆ ತಲುಪಿದಾಗ ಮಾತ್ರ ಇಲಾಖೆ ಉದ್ದೇಶ ಈಡೇರುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ತಿಳಿಸಿದರು.

ತಾಪಂನಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ 32ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು. ತಾಲೂಕಿನ ವಜ್ರಬಂಡಿ ಗ್ರಾಪಂನ ಬನ್ನಿಗೊಳ, ಗೆದಗೇರಿ, ಗುನ್ನಾಳ ಹಾಗೂ ಕುಕನೂರ ತಾಲೂಕಿನ ಬನ್ನಿಕೊಪ್ಪ ಗ್ರಾಪಂನ ಮಾಳೆಕೊಪ್ಪ ಗ್ರಾಮದಲ್ಲಿ ಡೆಂೆ ಪ್ರಕರಣಗಳು ಪತ್ತೆ ಮಾಡಿದ್ದು, ಸ್ವಚ್ಛಗೊಳಿಸಿ ಫಾಗಿಂಗ್ ಮಾಡಿಸಬೇಕು.

ಕಲುಷಿತ ನೀರಿನಿಂದಾಗಿ ಹಿರೇವಂಕಲಕುಂಟಾ ವ್ಯಾಪ್ತಿಯ ನಿಲೋಗಲ್, ಬಂಡಿಯ ಹಗೇದಾಳ, ತುಮ್ಮರಗುದ್ದಿ, ಬಳೂಟಗಿ ಹಾಗೂ ಯರೇಹಂಚಿನಾಳ ಚಿಕ್ಕೆನಕೊಪ್ಪದಲ್ಲಿ ಚಿಕನ್‌ಗೂನ್ಯ ಸಮಸ್ಯೆ ಕಂಡುಬಂದಿದೆ. ಈ ಕೂಡಲೇ ನೀರಿನ ಪರೀಕ್ಷೆ ನಡೆಸಿ ಶುದ್ಧ ನೀರು ಬರುವಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆಗೆ ತಿಳಿಸಿದರು.

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ 87ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಈಗಾಗಲೇ ಸಹಕಾರ ಸಂಘಗಳ ಮೂಲಕ 2400 ಮೆಟ್ರಿಕ್ ಟನ್ ಗೊಬ್ಬರ ಪೂರೈಸಲಾಗಿದೆ. ಇನ್ನು ಬೇಡಿಕೆ ಇದ್ದು, ನಿರಂತರವಾಗಿ ವಿತರಣೆ ಮಾಡಲಾಗುತ್ತಿದೆ. ಗುರಿಯಂತೆ ಗೊಬ್ಬರ ವಿತರಣೆಯಾಗಬೇಕು. ಈ ಬಾರಿ 500 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಗುರಿ ಇದ್ದು, ರೈತರು ತಮ್ಮ ಜಮೀನುಗಳಲ್ಲಿ ಕೃಷಿಹೊಂಡು ನಿರ್ಮಿಸಿಕೊಳ್ಳಬಹುದು. ಈ ಆರ್ಥಿಕ ವರ್ಷದಲ್ಲಿ 1200ರೈತರಿಗೆ ಸ್ಪಿಂಕ್ಲರ್ ಪೈಪ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಪ್ರಮೋದ ತುಂಬಳ ಮಾಹಿತಿ ನೀಡಿದರು.

ಪ್ರಭಾರಿ ಸಿಇಒ ಅಶೋಕ ಗೌಡರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಮಕ್ಕಳ ಅಭ್ಯಾಸದ ಗುಣಮಟ್ಟ ಹೆಚ್ಚಾಗಲು ಇಲಾಖೆಯಿಂದ 29ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡು ಅಭ್ಯಾಸ ಮಾಡಿಸಲಾಗುತ್ತಿದೆ. ವಾರದಲ್ಲಿ 2ಬಾರಿ ತಂಡ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಇನ್ನು ಆರ್.ಟಿ ಪ್ರಕಾರ ಮಂಜೂರಿ ಕಾರ್ಯನಿರತ ಮತ್ತು ಖಾಲಿ ಹುದ್ದೆಗಳ ಮಾಹಿತಿ ಪ್ರಕಾರ 499 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರು.

ಸಭೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ನೂತನ ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅವರನ್ನು ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಪಿಡಿಒ ಸಂಘ ಸನ್ಮಾನಿಸಿ ಗೌರವಿಸಿತು.

ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಂಗನಗೌಡ ಇತರರಿದ್ದರು.