ಟಾರ್ಪಲ್ ಹಾಸಿರುವ ಗಂಗೊಳ್ಳಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ 
ಜಿಲ್ಲೆ

ಸೋರುತ್ತಿದೆ ಗಂಗೊಳ್ಳಿ ವಿಎ ಕಚೇರಿ, ಭೀತಿಯಲ್ಲಿ ನಿತ್ಯವೂ ಕಾರ್ಯನಿರ್ವಹಣೆ ಹೊಸ ಕಟ್ಟಡಕ್ಕೆ ಅನುದಾನ ಕೊರತೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮೀನುಗಾರಿಕೆಗೆ ಹೆಸರಾದ ಗಂಗೊಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಪೂರ್ತಿಯಾಗಿ ಸೋರುತ್ತಿದೆ. ಎಸ್.ವಿ.ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಗ್ರಾಮಲೆಕ್ಕಾಧಿಕಾರಿಯ ಕಚೇರಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಈ ಹಿಂದೆ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಬಳಿಕ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದ್ದ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದರಿಂದ ಸೋರುತ್ತಿದೆ.

ಮಳೆಗಾಲದಲ್ಲಿ ನೀರು ಸೋರುತ್ತಿರುವುದರಿಂದ ಗ್ರಾಮಲೆಕ್ಕಾಧಿಕಾರಿ ಕಚೇರಿಯಲ್ಲಿ ಇರುವ ದಾಖಲೆಗಳು ನೀರು ಬಿದ್ದು ಹಾಳಾಗುವ ಸಾಧ್ಯತೆ ಇದೆ. ದಾಖಲೆಗಳನ್ನು ಸುರಕ್ಷಿತವಾಗಿ ಇಡುವುದೇ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸಿಬ್ಬಂದಿಗೆ ಸವಾಲಾಗಿದ್ದು, ಶಿಥಿಲಗೊಂಡ ಕಟ್ಟಡದಲ್ಲಿ ಭೀತಿಯಿಂದಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ದುರಸ್ತಿಗೆ ಗ್ರಾಮ ಪಂಚಾಯಿತಿ ಅನುದಾನ ಮೀಸಲಿಟ್ಟಿದ್ದರೂ, ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಮೀಸಲಿಟ್ಟ ಅನುದಾನ ಸಾಕಾಗುತ್ತಿಲ್ಲ. ಹೀಗಾಗಿ ಈ ಕಟ್ಟಡದ ದುರಸ್ಥಿಗೆ ಗ್ರಾಮ ಪಂಚಾಯಿತಿ ಹಿಂದೇಟು ಹಾಕುತ್ತಿದೆ. ಹಳೇ ಕಟ್ಟಡ ತೆಗೆದು ಹೊಸ ಕಟ್ಟಡ ನಿರ್ಮಿಸಲು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರತಿಕ್ರಿಯೆ ಮಾತ್ರ ಶೂನ್ಯ.

ಛಾವಣಿಗೆ ಟಾರ್ಪಾಲ್ ಹೊದಿಕೆ

ಅನುದಾನದ ಕೊರತೆಯಿಂದ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ ದುರಸ್ತಿ ಕಾರ್ಯ ನಡೆದಿಲ್ಲ. ಈ ವರ್ಷ ಮೇಲ್ಛಾವಣಿಗೆ ಟಾರ್ಪಾಲ್ ಅಳವಡಿಸಲಾಗಿದ್ದು, ಕಳೆದ ವರ್ಷವೂ ಇದೇ ವಿಧಾನ ಅನುಸರಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಟಾರ್ಪಾಲ್ ಹಾಸಿನಡಿಯಲ್ಲಿ ಕಾರ್ಯನಿರ್ವಹಿಸುವುದು ಅಪಾಯಕಾರಿಯಾಗಿದೆ.ಗ್ರಾಮ ಪಂಚಾಯಿತಿಯ ಹಳೇ ಕಾರ್ಯಾಲಯ ಕಟ್ಟಡ ಮತ್ತು ಮೇಲ್ಛಾವಣಿ ಶಿಥಿಲಗೊಂಡಿದ್ದು, ದುರಸ್ತಿಗೆ ಅನುದಾನ ಮೀಸಲಿರಿಸಲಾಗಿದೆ. ಆದರೆ ಸಂಪೂರ್ಣ ಕಟ್ಟಡ ದುರಸ್ತಿ ಮಾಡಬೇಕಿರುವುದರಿಂದ ಅನುದಾನದ ಕೊರತೆ ಎದುರಾಗಿದೆ. ಹೊಸ ಕಟ್ಟಡ ನಿರ್ಮಿಸಲು ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು.-ಉಮಾಶಂಕರ, ಗಂಗೊಳ್ಳಿ ಪಿಡಿಒ